ಬೆಂಗಳೂರು : ನಾಡಿನ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು ಬಿಜೆಪಿ ಅವಮಾನಿಸುತ್ತಿದೆ , ಕ್ಷಮಿಸಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ನೀರಾವರಿ ಯೋಜನೆಗಳ ಬಗ್ಗೆಯೂ ರಾಜ್ಯದ ಬಿಜೆಪಿ ಸಂಸದರು ಬಾಯಿಯನ್ನೇ ಬಿಡಲಿಲ್ಲ, ರಾಜ್ಯಕ್ಕೆ ಆರ್ಥಿಕವಾಗಿ ವಂಚಿಸುತ್ತಿರುವ ಬಗ್ಗೆಯೂ ತುಟಿ ಬಿಡದ ಈ ಸಂಸದರಿಗೆ ನೀವು ಕೊಟ್ಟ ಓಟಿಗೆ ಏನು ಗೌರವ ಬಂತು? ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ನೀವು ಕೊಟ್ಟ ಓಟಿಗೆ ಗೌರವ ಕೊಟ್ಟಿದೆಯೋ-ಇಲ್ಲವೋ ಎಂದು ಎದೆ ಮುಟ್ಟಿಕೊಂಡು ಕೇಳಿಕೊಳ್ಳಿ. ನಿಮ್ಮ ಬದುಕಿಗೆ ಆಸರೆ ಆಗುತ್ತಿರುವ ನಾವು ಬೇಕೋ? – ದೇವರ ಹೆಸರಲ್ಲಿ ನಿಮ್ಮ ಭಾವನೆ ಕೆರಳಿಸಿ ನಿಮ್ಮ ಬದುಕಿಗೆ ವಂಚಿಸುತ್ತಿರುವ ಬಿಜೆಪಿ ಬೇಕಾ? ನಿಮ್ಮ ಹೃದಯವನ್ನು ಕೇಳಿ ಮತ ಹಾಕಿ.
ನಾಡಿನ ಬಡವರ, ಮಧ್ಯಮ ವರ್ಗದವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದು ತಪ್ಪಾ? ಆದರೆ ಬಿಜೆಪಿ ಇದನ್ನು ವಿರೋಧಿಸುತ್ತಿದೆ. ನಾಡಿನ ನಾಲ್ಕೂವರೆ ಕೋಟಿ ಫಲಾನುಭವಿಗಳನ್ನು ಬಿಜೆಪಿ ಪಕ್ಷ ಅವಮಾನಿಸುತ್ತಿದೆ. ನಿಮ್ಮನ್ನು ಅವಮಾನಿಸುವವರನ್ನು ಕ್ಷಮಿಸಬೇಡಿ.
ರೂ. 1500 ಕೋಟಿ ವೆಚ್ಚದ ಬೃಹತ್ ಏತ ನೀರಾವರಿ ಯೋಜನೆಯನ್ನು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರಕ್ಕೆ ನೀಡಿ ಲಕ್ಷ್ಮಣ್ ಸವದಿ ಅವರಿಗೆ ಕೊಟ್ಟ ಮಾತನ್ನು ನಾವು ಈಡೇರಿಸಿದ್ದೇವೆ. ಈ ಯೋಜನೆಯಿಂದ ಅಥಣಿ ತಾಲ್ಲೂಕಿನ ಶೇ95 ರಷ್ಟು ಭೂಮಿ, ಅಂದರೆ 50 ಸಾವಿರ ಎಕರೆ ಜಮೀನು ನೀರಾವರಿ ಸೌಲಭ್ಯ ಪಡೆಯಲಿವೆ. ಇದು ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ ಎನ್ನುವುದನ್ನು ಜಿಲ್ಲೆಯ ಜನತೆ ಮರೆಯಬಾರದು ಎಂದಿದ್ದಾರೆ.