ದೇಶದಲ್ಲಿ ಪ್ರಸ್ತುತ ತಲೆದೋರಿರುವ ಕೊರೊನಾ ಸಂಕಷ್ಟದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್ ಜನರ ಮೇಲೆ ರಾಜ್ಯ ಸರ್ಕಾರ ಸವಾರಿ ಮಾಡುತ್ತಿದೆ ಎಂದು ಜರಿದಿದ್ದಾರೆ.
ಆನೇಕಲ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಕೇಂದ್ರ ಸರ್ಕಾರ ಈಗಾಗಲೇ ಪರೀಕ್ಷೆಗಳನ್ನ ರದ್ದು ಮಾಡಿದೆ. ಆದರೆ ರಾಜ್ಯದ ಶಿಕ್ಷಣ ಮಂತ್ರಿ ಮಾತ್ರ ನಿಷ್ಕ್ರಿಯರಾಗಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿ ದೊಡ್ಡವರ ಮೇಲೆ ಸವಾರಿ ಮಾಡಿದ್ದು ಸಾಲದು ಎಂಬಂತೆ ಇದೀಗ ಮಕ್ಕಳ ಮೇಲೂ ರಾಜ್ಯ ಸರ್ಕಾರ ಸವಾರಿ ಮಾಡ್ತಿದೆ ಎಂದು ಗುಡುಗಿದ್ದಾರೆ.
ಬಿಜೆಪಿ ಸರ್ಕಾರ ಬೆಡ್ ದಂಧೆ ನಡೆಸಿದ್ದಾಯ್ತು. ಈಗ ವ್ಯಾಕ್ಸಿನೇಷನ್ ವಿಚಾರದಲ್ಲೂ ಉಳ್ಳವರ ಪರವಾಗಿ ಕೆಲಸ ಮಾಡ್ತಿದೆ. ಲಸಿಕೆಗಳು ಕಾಳಸಂತೆಯಲ್ಲಿ ಮಾರಾಟವಾಗ್ತಿದೆ. ಗ್ರಾಮೀಣ ಭಾಗದ ಬಡಜನರಿಗೆ ಲಸಿಕೆ ನೀಡದೇ ತಮಗೆ ಬೇಕಾದವರಿಗೆ ಲಸಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಲಸಿಕೆ ದಂಧೆಯನ್ನ ನ್ಯಾಯಮೂರ್ತಿಗಳು ಗಮನಿಸಬೇಕು. ಹೈಕೋರ್ಟ್ ನೇತೃತ್ವದಲ್ಲಿ ಜನತೆಗೆ ನ್ಯಾಯ ಸಿಗಬೇಕಿದೆ. ಬಿಜೆಪಿ ಸರ್ಕಾರ ಜನರ ಸಾವು, ನೋವು ಮಾತ್ರವಲ್ಲದೇ ಬೂದಿ ಬಿಡೋದ್ರಲ್ಲೂ ಪ್ರಚಾರ ತೆಗೆದುಕೊಳ್ತಿದೆ ಎಂದು ಆಕ್ರೋಶ ಹೊರಹಾಕಿದ್ರು.