ಚೆನ್ನೈ/ಲಖ್ನೋ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಿಜೆಪಿ ಮಿತ್ರ ಪಕ್ಷ ವಿರೋಧ ವ್ಯಕ್ತಪಡಿಸಿದೆ. 2019ರ ಚುನಾವಣೆ ವೇಳೆಯಲ್ಲಿಯೇ ನಮ್ಮ ನಿಲುವು ತಿಳಿಸಿದ್ದೇವೆ. ಈಗಲೂ ನಮ್ಮ ನಿಲುವಿಗೆ ಬದ್ಧ ಎಂದು ಎಐಎಡಿಎಂಕೆ ಅಧ್ಯಕ್ಷ ಕೆ. ಪಳನಿಸ್ವಾಮಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಳನಿಸ್ವಾಮಿ, 2019ರ ನಮ್ಮ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುವ ಸಂದರ್ಭದಲ್ಲಿಯೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ವಿರೋಧವಿದೆ ಎಂದು ತಿಳಿಸಿದ್ದೇವೆ. ನಾವು ಜಾತ್ಯತೀತವಾಗಿದ್ದು, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅದನ್ನು ಒಂದು ವೇಳೆ ಜಾರಿ ಮಾಡಿದ್ದಲ್ಲಿ ಅದು ಧರ್ಮವಾರು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕು ಎಂದು ಆಗ್ರಹಿಸಿದೆ.
ಕಾನೂನು ಆಯೋಗಕ್ಕೆ ಈ ಕುರಿತು ಅಭಿಪ್ರಾಯ ಸಲ್ಲಿಸಲಾಗಿದೆ. ಕೇವಲ ಬುಡಕಟ್ಟು ಜನಾಂಗ ಮಾತ್ರವಲ್ಲದೇ, ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರನ್ನು ಏಕರೂಪ ನಾಗರಿಕ ಸಂಹಿತೆಯಿಂದ ಹೊರಗಿಡಬೇಕೆಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವಕ್ತಾರ ಖಾಸಿಂ ರಸುಲ್ ಇಲ್ಯಾಸ್ ಹೇಳಿದ್ದಾರೆ.