ಬೆಂಗಳೂರು : ಬಿಜೆಪಿ ಕಳೆದ 9 ವರ್ಷದಲ್ಲಿ ದೇಶದ ಸಿರಿವಂತರ 14.56 ಲಕ್ಷ ಕೋಟಿ ರೂಗಳನ್ನು ʻರೈಟ್ ಆಫ್ʼ ಮಾಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜ್ಯದ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರವು ಗ್ಯಾರಂಟಿಗಳನ್ನು ಜಾರಿಗೊಳಿಸಿದಾಗ ‘ಆರ್ಥಿಕತೆಗೆ ಹೊಡೆತʼ ಎಂದು ಹಿಯಾಳಿಸಿದವರ ನಿಜವಾದ ಬಣ್ಣ ಇದೀಗ ಬಯಲಾಗಿದೆ.ಬಡವರಿಗೆ ಕಿಂಚಿತ್ತೂ ಸಹಾಯ ಮಾಡದ ಕೇಂದ್ರದ ಬಿಜೆಪಿ ಸರ್ಕಾರ, ಕಳೆದ9 ವರ್ಷಗಳಲ್ಲಿ ದೇಶದ ಸಿರಿವಂತರ ಬರೋಬ್ಬರಿ ₹14.56 ಲಕ್ಷ ಕೋಟಿ ರೂಪಾಯಿಗಳನ್ನು ʻರೈಟ್ ಆಫ್ʼ ಮಾಡಿದೆ.
ಕರ್ನಾಟಕದ ಪಾಲಿಗೆ ನ್ಯಾಯಯುತವಾಗಿ ಬರಬೇಕಿದ್ದ ಜಿಎಸ್ಟಿಯ ಪಾಲು, ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರವು ಶ್ರೀಮಂತರ ಸಾಲಗಳನ್ನ ಮನ್ನಾ ಮಾಡುವುದರಲ್ಲಿ ತೋರುತ್ತಿರುವ ಅತ್ಯುತ್ಸಾಹದ ಹಿಂದಿನ ರಹಸ್ಯವೇನು ?ಕೇಂದ್ರದ ಸಾಲ ಮನ್ನಾ ಭಾಗ್ಯ ಪಡೆದ ʻದೊಡ್ಡ ಸಂಸ್ಥೆʼಗಳು, ಉದ್ಯಮಿಗಳು ಯಾರು ? ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ಮಿತ್ರರೇ? ಬ್ಯಾಂಕ್ಗಳಿಗೆ ಆದ ಭಾರಿ ನಷ್ಟಕ್ಕೆ ಯಾರು ಹೊಣೆ? ನಷ್ಟದ ಹೊರೆಯನ್ನು ಬ್ಯಾಂಕಿನ ಸಾಮಾನ್ಯ ಸಾಮಾನ್ಯ ಗ್ರಾಹಕರ ಹೆಗಲಿಗೇರಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ.
ನಿರಂತರವಾಗಿ ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.