ಶಿವಮೊಗ್ಗ : ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಹಲವರನ್ನು ಬಂಧಿಸಿದ್ದಾರೆ. ಇದರ ನಡುವೆ ಶಿವಮೊಗ್ಗ ಗಲಾಟೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಇದರ ನಡುವೆ ಶಿವಮೊಗ್ಗಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿದೆ. ಮೊದಲು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಸಮಿತಿ ಕಲ್ಲೇಟಿನಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ತಂಡದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಡಾ.ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಚನ್ನಬಸಪ್ಪ ಇದ್ದಾರೆ.
ನಂತರ ಶಿವಮೊಗ್ಗದ ರಾಗಿಗುಡ್ಡಕ್ಕೆ ತೆರಳಿ ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಸಂತ್ರಸ್ತರಾದ ಪ್ರಸನ್ನ, ಸುಶೀಲಾ, ನಂದಿನಿ, ಸುಚಿತ್ರಾ ನಿವಾಸಕ್ಕೆ ಭೇಟಿ ನೀಡಿದ ರಾಜ್ಯ ಬಿಜೆಪಿ ನಾಯಕರ ಬಳಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಮೆರವಣಿಗೆ ವೇಳೆ ನಮ್ಮ ಮನೆಗಳ ಮೇಲೆ ದಾಳಿ ಮಾಡಿದ್ದು ಏಕೆ? ಹೆಂಗಸರು, ಮಕ್ಕಳು ಬದುಕುವುದು ಹೇಗೆ, ನಮಗೆ ರಕ್ಷಣೆ ಬೇಕು. ಸರ್ಕಾರ ಸತ್ತು ಹೋಗಿದೆಯಾ ಎಂದು ಕಟೀಲ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಹಲವು ಮನೆಗಳಿಗೆ ಹಾನಿಯಾಗಿತ್ತು.