ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.
ಕಳೆದ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಈ ಚುನಾವಣೆಯಲ್ಲಿಯೂ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಇರುವ ಬಿಜೆಪಿ ಕಷ್ಟವಾದರೂ ಪ್ರಯತ್ನ ನಡೆಸಿದಲ್ಲಿ ಗೆಲ್ಲಬಹುದಾದ 115 ಸ್ಥಾನಗಳನ್ನು ಗುರುತಿಸಿದೆ. ಈ ಕ್ಷೇತ್ರಗಳಲ್ಲಿ ಗೆಲುವಿನ ಕಾರ್ಯತಂತ್ರ ರೂಪಿಸಿರುವ ಬಿಜೆಪಿ ವಿವಿಧ ರಾಜ್ಯಗಳ ಚುನಾವಣೆ ಪರಿಣಿತ ನಾಯಕರು, ಸಂಸದರು, ಶಾಸಕರನ್ನು ಒಳಗೊಂಡ 50 ಜನರ ತಂಡವನ್ನು ರಚಿಸಿದೆ.
ಇವರಿಗೆ ತಲಾ ಎರಡರಿಂದ ಮೂರು ಕ್ಷೇತ್ರಗಳ ಹೊಣೆ ನೀಡಲಾಗುತ್ತದೆ. ರಾಜ್ಯದ 224 ಕ್ಷೇತ್ರಗಳನ್ನು ಎ, ಬಿ, ಸಿ ಎಂದು ವರ್ಗೀಕರಣ ಮಾಡಿರುವ ಬಿಜೆಪಿ ಗೆಲುವಿನ ಸಾಧ್ಯತೆ ಇರುವ ಕ್ಷೇತ್ರಗಳನ್ನು ಎ ವಲಯದಲ್ಲಿ ನಿಗದಿಪಡಿಸಿದೆ. ಹೆಚ್ಚು ಶ್ರಮ ಹಾಕಿದಲ್ಲಿ ಗೆಲ್ಲಬಹುದಾದ 115 ಕ್ಷೇತ್ರಗಳನ್ನು ಬಿ ವಲಯದಲ್ಲಿ ಗುರುತಿಸಿದ್ದು, ಇಂತಹ ಕ್ಷೇತ್ರಗಳಿಗೆ 50 ಜನರ ಪರಿಣಿತರ ತಂಡಕ್ಕೆ ಹೊಣೆ ವಹಿಸಲಾಗುವುದು. ಈ ತಂಡ ಗೆಲುವಿನ ಕಾರ್ಯತಂತ್ರ ರೂಪಿಸಿ ಕಾರ್ಯಗತಗೊಳಿಸಲಿದೆ.
ದೇಶದ ವಿವಿಧ ರಾಜ್ಯಗಳಿಂದ 50 ಸಂಸದರು, ಶಾಸಕರು, ನಾಯಕರನ್ನು ಒಳಗೊಂಡ ಮತ್ತು ಈ ಹಿಂದೆ ವಿವಿಧ ಚುನಾವಣೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದವರನ್ನು ತಂಡದಲ್ಲಿ ನಿಯೋಜಿಸಲಾಗಿದೆ.