ಮಂಗಳೂರು: ವಿಧಾನ ಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಜೂನ್ 3ರಂದು ನಡೆಯಲಿದೆ. ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವುದಾಗಿ ಬಿಜೆಪಿ ಟಿಕೆಟ್ ವಂಚಿತ ಉಡುಪಿ ಮಾಜಿ ಶಾಸಕ ಬಿಜೆಪಿಯ ರಘುಪತಿ ಭಟ್ ಘೋಷಿಸಿದ್ದಾರೆ.
ಬಿಜೆಪಿ -ಜೆಡಿಎಸ್ ಮೈತ್ರಿಯ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತ ಎಸ್.ಆರ್. ಹರೀಶ್ ಆಚಾರ್ಯ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ನೈರುತ್ಯ ಪದವಿತರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಸ್ಪರ್ಧೆಯ ಬಿಸಿ ತಟ್ಟಿದೆ.
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕರಾವಳಿ ಜಿಲ್ಲೆ ನಿರ್ಲಕ್ಷಿಸಿವೆ. ಕರಾವಳಿಯಿಂದ ಯಾರಿಗೂ ಟಿಕೆಟ್ ನೀಡಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೆ. ಮೈತ್ರಿ ಪಕ್ಷಕ್ಕೆ ಟಿಕೆಟ್ ನೀಡಲಾಗಿದೆ. ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಿರುವುದರಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಎಸ್.ಆರ್. ಹರೀಶ್ ಆಚಾರ್ಯ ತಿಳಿಸಿದ್ದಾರೆ.