ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಕೃಷಿ ಮಾರುಕಟ್ಟೆಗಳಿಗೆ ಉತ್ಪನ್ನವನ್ನು ಸಾಗಿಸುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ ಕಲ್ಪಿಸಲಾಗುವುದು. ಹೈನುಗಾರಿಕೆಗೆ ಉತ್ತೇಜನ ನೀಡಲು ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನವನ್ನು 5 ರಿಂದ 7 ರೂ.ಗೆ ಏರಿಕೆ ಮಾಡಲಾಗುವುದು ಎಂದು ಭರವಸೆ ನೀಡಲಾಗಿದೆ.
ಭಗೀರಥ ಶಪಥ ಯೋಜನೆ ಅಡಿ ಭದ್ರಾ ಮೇಲ್ದಂಡೆ, ಕಳಸಾ – ಬಂಡೂರಿ, ಕೃಷ್ಣ ಮೇಲ್ದಂಡೆಯಂತಹ ಬಾಕಿ ಉಳಿದ ಎಲ್ಲಾ ಪ್ರಮುಖ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲಾಗುವುದು. ಇಸ್ರೇಲ್ ಮಾದರಿ ಹನಿ ನೀರಾವರಿ ಯೋಜನೆಯು ಕೃಷಿ ಸಿಂಚಾಯಿ ಯೋಜನೆಯಡಿ ಜಾರಿಗೊಳಿಸಲಾಗುತ್ತದೆ. 200 ಮೀನು ಕೃಷಿ ಉತ್ಪಾದನಾ ಕೇಂದ್ರ ಸೇರಿ ಒಂದು ಸಾವಿರ ಎಫ್.ಪಿ.ಒ. ಸ್ಥಾಪನೆ ಮಾಡಲಾಗುವುದು.
ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ನೀಡುವ ಸಹಾಯಧನವನ್ನು 10 ಸಾವಿರ ರೂ.ನಿಂದ 15,000 ರೂ.ಗೆ ಹೆಚ್ಚಳ ಮಾಡಲಾಗುತ್ತದೆ. ರೈತರಿಗೆ ಶೇಕಡ 80ರಷ್ಟು ಸಬ್ಸಿಡಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. 5,00,000 ಮನೆ ನಿರ್ಮಾಣ ಗುರಿಯೊಂದಿಗೆ ಎಲ್ಲಾ ಪ್ರಮುಖ ನಗರಗಳಲ್ಲಿ ಬಹುಮಹಡಿ ವಸತಿ ಯೋಜನೆ ಜಾರಿಗೊಳಿಸಲಾಗುವುದು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ 2 ಲಕ್ಷ ಮನೆ ನಿರ್ಮಾಣದೊಂದಿಗೆ 10 ಲಕ್ಷ ಮನೆ ನಿರ್ಮಾಣ ಗುರಿ ಜೊತೆಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ ಯೋಜನೆ ಅಡಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ವಿಮಾ ಮೊತ್ತ 10 ಲಕ್ಷ ರೂಪಾಯಿಗೆ, ಎಪಿಎಲ್ ಕುಟುಂಬದ ಆರೋಗ್ಯ ವಿಮೆ ಮೊತ್ತ 5 ಲಕ್ಷ ರೂ. ಗೆ ಹೆಚ್ಚಳ ಮಾಡಲಾಗುವುದು. ಇದೇ ರೀತಿ ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಆರ್ಥಿಕತೆ, ಕೈಗಾರಿಕೆ, ಮೂಲ ಸೌಕರ್ಯ, ಉತ್ತಮ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ, ಕ್ರೀಡೆ, ಸಂಸ್ಕೃತಿ, ಪರಂಪರೆ ಸೇರಿ ಎಲ್ಲಾ ವಲಯಗಳ ನಾಗರೀಕರನ್ನು ಸೆಳೆಯಲು ಬಿಜೆಪಿಯಿಂದ ಪ್ರಜಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.