ಬೈಂದೂರು: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಇದು ಸಾಧ್ಯವಾದರೆ, ಬಡವರಿಗೆ ನೀಡಿದ್ದ ಜನಪರವಾದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಕಳವಳ ವ್ಯಕ್ತಪಡಿಸಿದರು.
ಸಿದ್ಧಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶಂಕರನಾರಾಯಣ ಪೇಟೆಯ ಅಮ್ಮ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಆಶ್ವಾಸನೆಯನ್ನು ಜನಸಾಮಾನ್ಯರಿಗೆ ನೀಡಿತ್ತು. ಈಗ ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸಲಾಗಿದೆ. ಇಲ್ಲಿ ಶೇ. 98 ರಷ್ಟು ಜನ ಒಂದಲ್ಲಾ ಒಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಆದರೆ, ಬಿಜೆಪಿಯವರಿಗೆ ಜನಪರ ಯೋಜನೆಗಳನ್ನು ನೀಡಲು ಆಸಕ್ತಿ ಇಲ್ಲ. ಬಿಜೆಪಿ ಪಕ್ಷ ಅಶಕ್ತರನ್ನು ತುಳಿದು ಆಳ್ವಿಕೆ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ‘ತಂದೆ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗಲು ನನಗೂ ಅವಕಾಶ ಕಲ್ಪಿಸಿಕೊಡಿ. ಕ್ಷೇತ್ರದಲ್ಲಿ ಮನೆಯ ಮಗಳಾಗಿ ಸೇವೆ ಸಲ್ಲಿಸುತ್ತೇನೆ’ಎಂದರು.
ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಬಿಜೆಪಿ ಪಕ್ಷದವರು ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಉಳ್ಳವರ ಸಾಲ ಮನ್ನಾ ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನ ಮಟ್ಟವನ್ನು ಸುಧಾರಿಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಬಿ.ಆರ್.ಅಂಬೇಡ್ಕರ್ ಅವರು ನೀಡಿದ್ದ ಸಂವಿಧಾನವನ್ನು ಅಳಿಸಿ ಹಾಕಲಿದ್ದಾರೆ. ಅದಕ್ಕೆ ಅವಕಾಶ ಕಲ್ಪಿಸಿಕೊಡಕೂಡದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯದವರಿಗೆ ಸಮಾನವಾದ ಅವಕಾಶ ನೀಡಬೇಕು. ಆ ಕಾರ್ಯವನ್ನು ಕಾಂಗ್ರೆಸ್ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಶಕ್ತಿ ತುಂಬಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಬೆಂಬಲಿಸಬೇಕು ಎಂದು ಕೋರಿದರು.
ನಟ ಶಿವರಾಜ್ ಕುಮಾರ್ ಮೊದಲಾದವರು ಇದ್ದರು.