ನವದೆಹಲಿ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ADR) ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಗೊತ್ತಾಗಿದೆ. 350 ಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಇದರಲ್ಲಿ ಬಿಜೆಪಿಗೆ ಅಗ್ರಸ್ಥಾನವಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಇದ್ದಾರೆ.
296 ಶಾಸಕರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. 39 ಕೇಂದ್ರ ಮತ್ತು ರಾಜ್ಯಗಳ ಸಚಿವರು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದು, 67 ಸಂಸದರ ಅಪರಾಧ ಪ್ರಕರಣ ಹೊಂದಿದ್ದಾರೆ. ಹೀಗೆ 363 ಜನಪ್ರತಿನಿಧಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದು, ಅಪರಾಧ ಸಾಬೀತಾದರೆ ಇವರೆಲ್ಲರೂ ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಅನರ್ಹಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಶಾಸಕರು, ಸಂಸದರು, ಸಚಿವರು ಸೇರಿದಂತೆ 363 ಜನಪ್ರತಿನಿಧಿಗಳ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಅಪರಾಧ ಸಾಬೀತಾದಲ್ಲಿ ಇವರೆಲ್ಲರೂ ಅನರ್ಹರಾಗಲಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ಅಧ್ಯಯನದಲ್ಲಿ ಹೇಳಲಾಗಿದೆ.
ಜನಪ್ರತಿನಿಧಿ ಕಾಯ್ದೆ 8ನೇ ಸೆಕ್ಷನ್ 1,2 ಮತ್ತು ಮೂರನೇ ಉಪ ಸೆಕ್ಷನ್ ಪ್ರಕಾರ ಪಟ್ಟಿಮಾಡಲಾದ ಅಪರಾಧ ಕೃತ್ಯಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿರುವ ಆರೋಪವಿದೆ. ಇಂತಹವರು ಅಪರಾಧ ಎಸಗಿರುವುದು ಸಾಬೀತಾದಲ್ಲಿ ಆರು ವರ್ಷಗಳವರೆಗೆ ಅನರ್ಹರಾಗಲಿದ್ದಾರೆ. ಈ 363 ಜನಪ್ರತಿನಿಧಿಗಳ ವಿರುದ್ಧ ಕಾಯ್ದೆಯ ಅನ್ವಯ ಪಟ್ಟಿಮಾಡಲಾದ ಅಪರಾಧ ಕೃತ್ಯಗಳು ದಾಖಲಾಗಿವೆ.
ಬಿಜೆಪಿಯ 83 ಜನಪ್ರತಿನಿಧಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಶಾಸಕರು ಮತ್ತು ಸಂಸದರು ಸಲ್ಲಿಸಿದ ಚುನಾವಣೆ ಪ್ರಮಾಣಪತ್ರ ಸಲ್ಲಿಸಿದ್ದು, ಇದನ್ನು ವಿಶ್ಲೇಷಿಸಿ ಜನ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕೆಲವು ಜನಪ್ರತಿನಿಧಿಗಳ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಇವೆ ಎನ್ನಲಾಗಿದೆ.