ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಶೀಘ್ರವೇ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಬಾಂಬೆ ಬಾಯ್ಸ್ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಗೆ ಮರಳುವ ಸಾಧ್ಯತೆ ಇದೆ.
ಮೊದಲ ಹಂತದಲ್ಲಿ ಒಬ್ಬ ಶಾಸಕರು ಪಕ್ಷಾಂತರ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ವೇಳೆಗೆ ನಾಲ್ಕರಿಂದ ಐದು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಾಲಿ ಶಾಸಕರಲ್ಲಿ ಕೆಲವರು ಬಿಜೆಪಿ ತೊರೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ ಆಪರೇಷನ್ ಹಸ್ತ ಕಾರ್ಯತಂತ್ರ ರೂಪಿಸಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ಕಾರ್ಯತಂತ್ರ ರೂಪಿಸಲಾಗುತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್ ನ ಕೆಲವು ಶಾಸಕರಿಗೆ ಗಾಳ ಹಾಕಲಾಗಿದೆ. ಬೆಂಗಳೂರಿನ ಮೂವರು, ಉತ್ತರ ಕನ್ನಡದ ಒಬ್ಬರು ಪಕ್ಷಾಂತರದ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿಯ ಕೆಲವು ಶಾಸಕರೊಂದಿಗೆ ರಾಜ್ಯ ಕಾಂಗ್ರೆಸ್ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಪಕ್ಷ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ಮತ್ತೊಮ್ಮೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಮೊದಲಿಗೆ ಬಿಜೆಪಿ ಶಾಸಕರಲ್ಲಿ ಒಬ್ಬರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಲೋಕಸಭೆ ಚುನಾವಣೆ ವೇಳೆಗೆ ನಾಲ್ಕೈದು ಶಾಸಕರು ಹಂತ ಹಂತವಾಗಿ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.