ಬೆಂಗಳೂರು: ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ. ಹೈಕಮಾಂಡ್ ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಇಲ್ಲವಾದರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನಗೆ ಇದುವರೆಗೆ ಹೈಕಮಾಂಡ್ ನಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರದ ನಾಯಕರು ಸೂಚಿಸಿದಾಗ ರಾಜೀನಾಮೆ ನೀಡುತ್ತೇನೆ. ವರಿಷ್ಠರು ಮುಂದುವರೆಯಲು ಸೂಚಿಸಿದರೆ ಮುಂದುವರೆಯುತ್ತೇನೆ. ಮುಖ್ಯಮಂತ್ರಿಯಾಗಿರುವ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತೇನೆ. ವರಿಷ್ಠರಿಂದ ರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಸಂದೇಶ ಬರಬಹುದು ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಮಾತುಗಳನ್ನಾಡಿರುವುದಕ್ಕೂ ಹೈಕಮಾಂಡ್ ನಿಂದ ಬರುವ ಸಂದೇಶಕ್ಕೆ ಸಂಬಂಧವಿಲ್ಲ. ನಾಳೆ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ರಾಜೀನಾಮೆ ಕೊಡುವಂತೆ ಸೂಚನೆ ಬಂದ ಕೂಡಲೇ ಕೊಡುತ್ತೇನೆ ಎಂದು ಹೇಳಿದ್ದಾರೆ.