
‘ಕೊರೋನಾ ವಿರುದ್ಧ ನಿರ್ಣಾಯಕ ಹೋರಾಟ ನಡೆಸಲು ರಾಜ್ಯಕ್ಕೆ ಸುಭದ್ರ ಸರ್ಕಾರದ ಅಗತ್ಯವಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಟ್ಟುಕೊಳ್ತಿರಾ? ಕಿತ್ತು ಹಾಕ್ತಿರಾ? ಅದು ಬಿಜೆಪಿಗೆ ಸಂಬಂಧಿಸಿದ ವಿಚಾರ. ಶೀಘ್ರವೇ ನಿರ್ಧಾರಕ್ಕೆ ಬಂದು ರಾಜ್ಯಕ್ಕೊಂದು ಸುಭದ್ರ ಸರ್ಕಾರ ಕೊಡಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ತೊಲಗಿ ಹೋಗಿ’.
ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪಕ್ಷಾಂತರಿಗಳ ಅನೈತಿಕ ಬಲದಿಂದ ಬಂದ ಅಧಿಕಾರವನ್ನು ಅನುಭವಿಸುತ್ತಿರುವ ಬಿಜೆಪಿ ಸರ್ಕಾರ ಮೂಲನಿವಾಸಿ ನಾಯಕರು ಈಗ ಅವರ ವಿರುದ್ಧವೇ ತಿರುಗಿಬಿದ್ದಿರುವುದು ಪ್ರಕೃತಿಯ ಸಹಜ ನ್ಯಾಯವೇ ಸರಿ. ಈಗಲೂ ಕಾಲ ಮಿಂಚಿಲ್ಲ. ಇಂತಹ ಅನೈತಿಕ ಬೆಂಬಲ ಬೇಡವೆಂದಾದರೆ ಪಕ್ಷಾಂತರಿಗಳನ್ನು ಕಿತ್ತುಹಾಕಿ. ಯಾಕೆ ಗೋಳಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಕೊರೋನಾ ನಿಯಂತ್ರಣಕ್ಕೆ ಬಂದಿಲ್ಲ. ಲಸಿಕೆ ನೀಡಿಕೆ ಕಾರ್ಯ ಕುಂಟುತ್ತಾ ಸಾಗಿದೆ. ಕೊರೋನಾ ಮೂರನೆಯ ಬಗ್ಗೆ ತಜ್ಞರು ನಿರಂತರವಾಗಿ ಎಚ್ಚರಿಸುತ್ತಿದ್ದಾರೆ. ಮುಖ್ಯಮಂತ್ರಿ ತನ್ನ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಜನರನ್ನು ಉಳಿಸುವವರು ಯಾರು ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಕಚೇರಿಯಲ್ಲಿ ಕುಳಿತು ಕೆಲಸ ಮಾಡಬೇಕಾದ ಸಚಿವರು ಮತ್ತು ಕ್ಷೇತ್ರದಲ್ಲಿ ಜನರ ಜೊತೆ ಇರಬೇಕಾದ ಬಿಜೆಪಿ ಶಾಸಕರು ದೆಹಲಿಯಿಂದ ಬಂದಿರುವ ಬಿಜೆಪಿ ಹೈಕಮಾಂಡ್ ಪ್ರತಿನಿಧಿಯ ಮುಂದೆ ಅಹವಾಲು ಸಲ್ಲಿಸಲು ಕ್ಯೂನಲ್ಲಿದ್ದಾರೆ. ಮುಖ್ಯಮಂತ್ರಿಯವರ ಪರ, ವಿರೋಧಿ ಬಣಗಳ ಕಿತ್ತಾಟದಲ್ಲಿ ಜನರ ನೋವನ್ನು ಕೇಳುವರು ಯಾರು ಎಂದು ಕೇಳಿದ್ದಾರೆ.
ಪ್ರಕೃತಿ ದಯೆ ತೋರುತ್ತಿರುವ ಕಾರಣದಿಂದಾಗಿಯೋ ಏನೋ ಕೊರೊನಾ ಸೋಂಕು ಸ್ವಲ್ಪ ತಹಬಂದಿಗೆ ಬರುತ್ತಿದೆ. ಅಷ್ಟರಲ್ಲಿ ಬಿಜೆಪಿ ಸರ್ಕಾರದಲ್ಲಿ ಭಿನ್ನಮತದ ಜಗಳ ತಾರಕಕ್ಕೇರಿ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಹೇಳಿದ್ದಾರೆ.