ಬೆಂಗಳೂರು : ಏ.2 ರಂದು ನಾಳೆ ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಎಂಟ್ರಿ ಕೊಡಲಿದ್ದು, ಡಿ.ಕೆ ಬ್ರದರ್ಸ್ ಭದ್ರಕೋಟೆಯಿಂದ ಚುನಾವಣಾ ರಣಕಹಳೆ ಆರಂಭಿಸಲಿದ್ದಾರೆ. ಇಂದು ರಾತ್ರಿಯೇ ಅಮಿತ್ ಶಾ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.
ನಾಳೆ ಬೆಳಗ್ಗೆ 9 ಗಂಟೆಗೆ ಮೊದಲು ಬಿಜೆಪಿ – ಜೆಡಿಎಸ್ ಪಕ್ಷದ ಪ್ರಮುಖರ ಜತೆ ಅಮಿತ್ ಶಾ ಅವರು ಉಪಾಹಾರವನ್ನು ಸೇವಿಸಲಿದ್ದಾರೆ. ನಂತರ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಸಮಾವೇಶವನ್ನು ನಡೆಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಸಮಾವೇಶ ನಿಗದಿಯಾಗಿದೆ.
ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿ ಐದು ಕ್ಷೇತ್ರದ ಪ್ರಮುಖರ ಜತೆ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ನಂತರ ಸಂಜೆ 6 ಗಂಟೆಗೆ ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿದೆ.