ಬೆಂಗಳೂರು: ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರು ಅಂತಿಮ ಗಡುವು ಮುಗಿದ ನಂತರ ಸಲ್ಲಿಸಿದ ನಾಮಪತ್ರವನ್ನು ರಾಜ್ಯ ಚುನಾವಣಾ ಆಯೋಗ ಅಂಗೀಕರಿಸುವ ಮೂಲಕ ಬಿಜೆಪಿ ಪರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜಕೀಯ ಒತ್ತಡಗಳಿಗೆ ಮಣಿಯುತ್ತಿರುವ ಚುನಾವಣಾ ಆಯೋಗದ ಕ್ರಮದ ವಿರುದ್ಧ ಹೈಕೋರ್ಟ್ ಮೊರೆ ಹೋಗುವುದಾಗಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಏಪ್ರಿಲ್ 20ರಂದು ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆ ಅಂತಿಮ ಗಡುವು ಮುಕ್ತಾಯವಾಗಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನ ಮಾಮನಿ ಅವರು ಗಡುವು ಮುಕ್ತಾಯವಾದ ನಂತರ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.
ಅಫಿಡವಿಟ್ ಛಾಪಾ ಕಾಗದವನ್ನು ಏಪ್ರಿಲ್ 20ರಂದು ಸಂಜೆ 7:38ಕ್ಕೆ ವಿಕಾಸ ಕೋ ಆಪರೇಟಿವ್ ಸೊಸೈಟಿ ಸಹಕಾರ ಸಂಘದಿಂದ ಖರೀದಿ ಮಾಡಿದ್ದಾರೆ. ಇ- ಸ್ಟಾಂಪಿಂಗ್ ಕಾಯ್ದೆ ಪ್ರಕಾರ ಸಂಜೆ 5 ಗಂಟೆ ಬಳಿಕ ಇ -ಸ್ಟಾಂಪ್ ಪೇಪರ್ ನೀಡುವಂತಿಲ್ಲ. ಆದರೂ ರಾತ್ರಿ ವೇಳೆ ಛಾಪಾ ಕಾಗದ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಕ್ರಮವಾಗಿ ನೀಡಿದ ಛಾಪಾ ಕಾಗದದ ಅಫಿಡವಿಟ್ ಅನ್ನು ಆಯೋಗದ ವೆಬ್ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಅಚ್ಚರಿ ಎನ್ನುವಂತೆ ಏಪ್ರಿಲ್ 20ರಂದು ಖರೀದಿ ಮಾಡಿರುವ ಛಾಪಾ ಕಾಗದ ದಾಖಲೆಯನ್ನು ಏಪ್ರಿಲ್ 19 ರಂದು ಅಪ್ಲೋಡ್ ಮಾಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ತಾಂತ್ರಿಕ ಕಾರಣಕ್ಕೆ ರತ್ನ ಮಾಮನಿ ಅವರ ನಾಮಪತ್ರ ತಿರಸ್ಕರಿಸಬೇಕಿತ್ತು. ಆದರೆ ಬಿಜೆಪಿ ನಾಯಕರು ಮತ್ತು ಸರ್ಕಾರದ ಒತ್ತಡಕ್ಕೆ ಮಣಿದು ಚುನಾವಣಾ ಆಯೋಗ ನೀತಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಆಯೋಗ ಕೂಡಲೇ ತಪ್ಪು ಸರಿಪಡಿಸಿಕೊಂಡು ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಅವರ ನಾಮಪತ್ರ ತಿರಸ್ಕರಿಸಬೇಕು. ಇಲ್ಲವಾದಲ್ಲಿ ಹೈಕೋರ್ಟ್ ಮರೆ ಹೋಗುತ್ತೇವೆ ಎಂದು ಹೇಳಿದ್ದಾರೆ.