ಬೆಂಗಳೂರು: ಮಂಗಳವಾರ 189 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಇನ್ನೂ 12 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ.
ಹಾಲಿ ಶಾಸಕರಾಗಿರುವ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಎಸ್.ಎ. ರಾಮದಾಸ್, ಕಳಕಪ್ಪ ಬಂಡಿ ಅವರ ಪ್ರತಿನಿಧಿಸುವ ಕ್ಷೇತ್ರಗಳಿಗೆ ಟಿಕೆಟ್ ಬಾಕಿ ಉಳಿದಿದೆ. ಚುನಾವಣೆ ರಾಜಕೀಯದಿಂದ ಹಿಂದೆ ಸರಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ನಗರ, ವಿ. ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜ ನಗರ ಕ್ಷೇತ್ರದಿಂದ ಅವರ ಪುತ್ರರಿಗೆ ಟಿಕೆಟ್ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿ ವರಿಷ್ಠರ ಭೇಟಿಯಾಗಿದ್ದಾರೆ. ಮಹಾದೇವಪುರ ಕ್ಷೇತ್ರದ ಅರವಿಂದ ಲಿಂಬಾವಳಿ ಅವರಿಗೂ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಿಲ್ಲ. ಕೃಷ್ಣರಾಜ ಶಾಸಕ ರಾಮದಾಸ್ ಅವರಿಗೆ ಟಿಕೆಟ್ ಸಿಕ್ಕಿಲ್ಲ.
ಎರಡನೇ ಪಟ್ಟಿ ಎಲ್ಲೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಯಡಿಯೂರಪ್ಪ ಸಂಬಂಧಿ ಎನ್.ಆರ್. ಸಂತೋಷ್ ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೂ ಟಿಕೆಟ್ ಮಿಸ್ ಆಗಿದೆ.