ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಸ್.ಎಸ್. ಟಿ ಅಧಿಕಾರಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಾ.ಕೆ.ಸುಧಾಕರ್ ಆಪ್ತ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದ ವೇಳೆ 4.82 ಕೋಟಿ ಹಣ ಜಪ್ತಿ ಮಾಡಿದ್ದರು. ಬೆಂಗಳೂರು ಉತ್ತರ ತಾಲೂಕಿನ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಕರೆ ಮಾಡಿದ್ದ ಸುಧಾಕರ್ ಗೋವಿಂದಪ್ಪ ಅವರಿಗೆ ಸಹಾಯ ಮಾಡಿ, ಹಣ ವಾಪಾಸ್ ಕೊಡುವಂತೆ ಸೂಚಿಸಿದ್ದರು. ಅಲ್ಲದೇ ಗೋವಿಂದಪ್ಪ ಅವರು ಕೂಡ ಮುನೀಶ್ ಮೌದ್ಗಿಲ್ ಗೆ ವಾಟ್ಸಾಪ್ ಸಂದೇಶ ರವಾನಿಸಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ವಿಚಾರವನ್ನು ಸಾಕ್ಷಿ ಸಮೇತ ಮುನೀಶ್ ಮೌದ್ಗಿಲ್ ಆದಾಯ ತೆರಿಗೆ ಇಲಾಖೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಎಸ್.ಎಸ್ ಟಿ ತಂಡದ ಮುಖ್ಯಸ್ಥ ದಶರಥ ಕಂಬಾರ್ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಧಾಕರ್ ವಿರುದ್ಧ ಅನುಚಿತ ಪ್ರಭಾವ, ಲಂಚಮ್ ಭ್ರಷ್ಟಾಚಾರ ಪ್ರಯತ್ನ, ಕರ್ತವ್ಯಕ್ಕೆ ಅಡ್ಡಿ ಹಾಗೂ ಹಸ್ತಕ್ಷೇಪ ಮಾಡಿದ್ದಾಗಿ ಆರ್ ಪಿ ಕಾಯ್ದೆಯಡಿ ಸೆಕ್ಷನ್ 171 ಇ, 171 ಎಫ್, 171ಬಿ, 171 ಸಿ ಆರೋಪದಲ್ಲಿ ಎಫ್ ಐ ಆರ್ ದಾಖಲಾಗಿದೆ.