ದಾವಣಗೆರೆ: ಮಾತನಾಡಲು ಬಾರದ ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಗೆದ್ದು ಮೋದಿಗೆ ಕಮಲದ ಹೂವು ಅರ್ಪಿಸುತ್ತಾರಂತೆ. ಮೊದಲು ದಾವಣಗೆರೆ ಜಿಲ್ಲೆಯ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲಿ. ಬರೀ ಮೋದಿ ಎನ್ನುತ್ತಾರೆ. ಅವರು ಏನು ಮಾಡಿದ್ದಾರೆ? ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮಹಿಳಾ ಅಭ್ಯರ್ಥಿ ನಮ್ಮ ಎದುರಾಳಿ. ಅವರು ಮೊದಲು ದಾವಣಗೆರೆ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲಿ. ಅವರಿಗೆ ಮಾತನಾಡಲು ಬರುವುದಿಲ್ಲ, ಅಡುಗೆ ಮಾಡಲು ಲಾಯಕ್ಕು. ನಮ್ಮ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಎಂದು ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿರುಗೇಟು ನೀಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆಕಾಶದಲ್ಲಿ ಹಾರುವ ಹಂತಕ್ಕೆ ಹೋಗಿದ್ದಾರೆ. ಈ ವಿಚಾರ ಅಜ್ಜನವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಮಹಿಳೆಯರಿಗೆ ಶಾಮನೂರು ಅಗೌರವ ತೋರಿಸಿದ್ದಾರೆ. ಅಡುಗೆ ಮಾಡಿ ಕೈ ತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ. ಮಹಿಳೆಯರು ಅಡುಗೆಯನ್ನು ಮಾಡುತ್ತಾರೆ ಆಕಾಶದಲ್ಲಿಯೂ ಹಾರಾಡುತ್ತಾರೆ. ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ಮೋದಿ ಒತ್ತು ನೀಡಿದ್ದಾರೆ. ಆದರೆ, ಇಂತಹ ನಾಯಕರು ಮಹಿಳೆಯರಿಗೆ ಅವಮಾನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.