ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿರುವ ಬಿಜೆಪಿ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಜ್ಜುಗೊಳಿಸಲು ‘ಬೂತ್ ವಿಜಯ’ ಅಭಿಯಾನ ಕೈಗೊಂಡಿದೆ.
ಜನವರಿ 2 ರಿಂದ 12 ರವರೆಗೆ ಬಿಜೆಪಿ ಬೂತ್ ವಿಜಯ ಅಭಿಯಾನ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಂಚಲನಾ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಎಲ್ಲಾ 39 ಸಂಘಟನಾ ಜಿಲ್ಲೆಗಳು 312 ಮಂಡಲಗಳು, 1445 ಮಹಾಶಕ್ತಿ ಕೇಂದ್ರಗಳು, ಹಾಗೂ 11,642 ಶಕ್ತಿ ಕೇಂದ್ರಗಳು, 58,186 ಬೂತ್ ಗಳ ಹಂತದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ಇಂದಿನಿಂದ ನಡೆಯಲಿದೆ ಎಂದರು.
ಕನಿಷ್ಠ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಅಭಿಯಾನ ಕೈಗೊಂಡಿದ್ದು, ಕೇಂದ್ರ, ರಾಜ್ಯ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಸುಮಾರು 20 ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪೇಜ್ ಪ್ರಮುಖರ ನೇಮಕ, ಮತಗಟ್ಟೆ ಹಂತದ ಸಮಿತಿ ರಚನೆ, ಮತಗಟ್ಟೆ ಹಂತದ ವಾಟ್ಸಾಪ್ ಗುಂಪುಗಳ ರಚನೆ, 50 ಲಕ್ಷ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸಲಾಗುವುದು ಎಂದು ತಿಳಿಸಿದ್ದಾರೆ.