![](https://kannadadunia.com/wp-content/uploads/2021/11/CM-Siddaramia15555238331564170798-1.jpg)
ಅರಸೀಕೆರೆ : ಬಿಜೆಪಿಯವರು ಕೇಂದ್ರ ಸರ್ಕಾರದ ಅನ್ಯಾಯವನ್ನು ಸಮರ್ಥನೆ ಮಾಡಿಕೊಂಡು ಪಕ್ಷ ರಾಜಕಾರಣಕ್ಕಾಗಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡಿಗೆ ತೊಂದರೆ ಇಲ್ಲ. ನಮ್ಮ ಸರ್ಕಾರಕ್ಕೆ ಮಾತ್ರ ಯಾಕೆ ತೊಂದರೆ ಎಂಬುದು ಬಿಜೆಪಿ ಪ್ರಶ್ನೆ. ಹಾಗಾದರೆ ಕೇರಳದವರು ಯಾಕೆ ದೆಹಲಿಗೆ ಬಂದು ಪ್ರತಿಭಟಿಸಿದರು? ಅದಕ್ಕೆ ತಮಿಳುನಾಡಿನವರು ಏಕೆ ಬೆಂಬಲ ನೀಡಿದರು? ತೆರಿಗೆ ಹಂಚಿಕೆಯಲ್ಲಿ ಎಲ್ಲಾ ರಾಜ್ಯಗಳಿಗೂ ಅನ್ಯಾಯವಾಗಿದೆ. ದಕ್ಷಿಣ ರಾಜ್ಯಗಳಿಗೆ ಜಾಸ್ತಿ ಅನ್ಯಾಯವಾಗಿದೆ. ಉತ್ತರದ ರಾಜ್ಯಗಳಿಗೆ ಕೊಡಬೇಡಿ ಎನ್ನುವುದಿಲ್ಲ. ಆದರೆ ನಮಗೆ ಅನ್ಯಾಯ ಮಾಡಬೇಡಿ. ಕೇಂದ್ರದ ಪಾಲಿನಲ್ಲಿಯೇ ಕೊಡಲಿ. ನಮ್ಮ ಪಾಲಿನಿಂದ ಯಾಕೆ ಕಿತ್ತುಕೊಡುತ್ತಾರೆ? 100 ರೂ ತೆರಿಗೆ ಸಂಗ್ರಹ ಮಾಡಿ ಕೊಟ್ಟರೆ 13 ರೂ. ಮಾತ್ರ ಕೊಡುತ್ತಾರೆ ಇದು ನ್ಯಾಯವೇ?
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ (ತಿದ್ದುಪಡಿ) ಮಸೂದೆ ಬಗ್ಗೆ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದಾಯ ಹೆಚ್ಚಿರುವ ದೇವಸ್ಥಾನಗಳಿಂದ ಕಡಿಮೆ ಆದಾಯವಿರುವ ಹಿಂದೂ ದೇವಾಲಯಗಳಿಗೆ ಬಳಸುವುದನ್ನು ವಿರೋಧಿಸುತ್ತಾರೆ. ಬೇರೆ ಯಾವ ಧರ್ಮದ ಧಾರ್ಮಿಕ ಕ್ಷೇತ್ರಗಳಿಗೂ ಇದನ್ನು ಬಳಸುವುದಿಲ್ಲ. ಅವರಿಗೆ ವಿಧಾನ ಪರಿಷತ್ತಿನಲ್ಲಿ ಬಹುಮತ ಇದೆ ಎಂದು ಮಸೂದೆ ಪಾಸಾಗದಂತೆ ಮಾಡಿದ್ದಾರೆ.
ಕಳೆದ ಬಾರಿ ಬಿಜೆಪಿ ಸರ್ಕಾರದ ವಿರುದ್ಧ 40% ಸರ್ಕಾರ ಎಂದು ಜಾಹೀರಾತು ನೀಡಿದ್ದಕ್ಕೆ ನನ್ನ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಂಸದರಾದ ರಾಹುಲ್ ಗಾಂಧಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡಿದ್ದು, ನಾವು ನಮ್ಮ ವಕೀಲರನ್ನು ನೇಮಿಸುತ್ತೇವೆ. ಅವರು ನ್ಯಾಯಾಲಯದಲ್ಲಿ ಸೂಕ್ತ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ಅಥವಾ ಪ್ರತಿಭಟನಾ ಜಾಹೀರಾತು ನೀಡಿದರೆ ಅದು ಅಪರಾಧವಾಗದು ಎನ್ನುವುದು ನನ್ನ ಭಾವನೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆಯವರ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಅಷ್ಟೆ. ಯಾರಾದರೂ ವೇತನ ನೀಡಿಲ್ಲ ಎಂದು ಹೇಳಿದ್ದಾರೆಯೇ? ಅನಂತ ಕುಮಾರ ಹೆಗಡೆ ನಾವು ಅಧಿಕಾರಕ್ಕೆ ಬಂದಿರುವುದೇ ಈ ಸಂವಿಧಾನ ಬದಲಾಯಿಸಲು ಎಂದವರು. ಅಂಥವರು ಹೇಳಿಕೆ ನೀಡಿದರೆ ಯಾವ ಕಿಮ್ಮತ್ತು ಇರುತ್ತದೆ? ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಸಂವಿಧಾನ ಕಿತ್ತೊಗೆಯಿರಿ ಎನ್ನುವವರನ್ನೇ ಕಿತ್ತೊಗೆಯಿರಿ ಎಂದು ಹೇಳಿದ್ದರು. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯ ರಾಗಲು ಲಾಯಕ್ಕೇ? ಎಂದು ಪ್ರಶ್ನಿಸಿದ್ದಾರೆ.
ಕಾಮಾಲೆ ರೋಗದವರಿಗೆ ಕಾಣೋದೆಲ್ಲಾ ಹಳದಿ. ಬಾಯಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ ಆದರೆ ಮುಸಲ್ಮಾನರನ್ನು ವಿರೋಧಿಸುತ್ತಾರೆ. ನನ್ನನ್ನು ಮುಸ್ಲಿಂ ಹೆಸರಿನ ಮೂಲಕ ಕರೆಯುವುದೇ ಅವರು ಅಲ್ಪಸಂಖ್ಯಾತರ ಧರ್ಮಕ್ಕೆ ವಿರುದ್ಧವಾಗಿರುವುದರಿಂದ ಎಂದರು.