ನವದೆಹಲಿ: ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾಜ್ಯದಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಗೆ ಹಲವು ಬಿಜೆಪಿ ನಾಯಕರು ಶನಿವಾರ ಹರ್ಷ ವ್ಯಕ್ತಪಡಿಸಿದರು, ಆದರೆ ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.
ಫೆಬ್ರವರಿ 14 ರಂದು ವಿಧಾನಸಭಾ ಚುನಾವಣಾ ಪ್ರಚಾರದ ಕೊನೆಯ ದಿನದಂದು ಧಾಮಿ ಅವರು ಈ ಘೋಷಣೆ ಮಾಡಿದರು. ಕರಡು ಸಂಹಿತೆಯು ಮದುವೆ, ವಿಚ್ಛೇದನ, ಆಸ್ತಿ ಮತ್ತು ಉತ್ತರಾಧಿಕಾರದಂತಹ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು. ಸಂವಿಧಾನದ 44 ನೇ ವಿಧಿಯ ಅನುಷ್ಠಾನಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ ಮತ್ತು ಸಾಮಾಜಿಕ ಸಾಮರಸ್ಯ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು, ಅಂತಹ ಸಂಹಿತೆಯ ಮಹತ್ವವನ್ನು ಸುಪ್ರೀಂ ಕೋರ್ಟ್ ಕೂಡ ಒತ್ತಿಹೇಳಿದೆ ಎಂದು ಹೇಳಿದರು.
ಧಾಮಿ ಅವರ ಹೇಳಿಕೆ ಸ್ವಾಗತಿಸಿದ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನದ ರಾಷ್ಟ್ರೀಯ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ: ಚುನಾವಣೆ ನಂತರ ದೇವಭೂಮಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಿಜೆಪಿ ನಿರ್ಧಾರವನ್ನು ಉತ್ತರಾಖಂಡ್ ಸಿಎಂ ಪ್ರಕಟಿಸಿದ್ದಾರೆ. ಬಿಜೆಪಿ ಸಮಾನತೆ ಮತ್ತು ಸಬಲೀಕರಣದ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಧಾಮಿ ಅವರನ್ನು ಅಭಿನಂದಿಸಿದರು, ಇದು ಮಹತ್ವದ ಸಾಂವಿಧಾನಿಕ ಬದ್ಧತೆಯನ್ನು ಪೂರೈಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ, ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಕೂಡ ಮುಖ್ಯಮಂತ್ರಿ ಧಾಮಿ ಅವರನ್ನು ಶ್ಲಾಘಿಸಿದ್ದಾರೆ.
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂವಿಧಾನದ 29 ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮಾಜಕ್ಕೆ ಅವರ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಹಕ್ಕನ್ನು ಹೊಂದಿದೆ ಮತ್ತು ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. UCC ಸ್ವಯಂಪ್ರೇರಿತವಾಗಿರಬೇಕು, ಕಡ್ಡಾಯವಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಈ ದೇಶದ ಸೌಂದರ್ಯವೆಂದರೆ ಅದು ಒಂದೇ ರಾಷ್ಟ್ರ ಆದರೆ ಹಲವಾರು ಸಂಸ್ಕೃತಿಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಪುಷ್ಕರ್ ಎಸ್ ಧಾಮಿ ಹೇಳಿರುವುದಕ್ಕೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ದಯವಿಟ್ಟು ನಿಮ್ಮ ಪಕ್ಷ ಮತ್ತು ನಿಮ್ಮನ್ನು ಮುಜುಗರಕ್ಕೀಡು ಮಾಡಬೇಡಿ. ಉತ್ತರಾಖಂಡದಲ್ಲಿ ನಿಮ್ಮ ಪಕ್ಷವು ಸೋಲುತ್ತಿದೆ. ನಿಮಗೆ ಕೆಲವು ಕಾನೂನು ಸಲಹೆಯ ಅಗತ್ಯವಿದೆ ಎಂದು ಇದು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.