ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಕಾಂಗ್ರೆಸ್ಸಿನ ರಾಹುಲ್ ಗಾಂಧಿ-ಪ್ರಿಯಾಂಕಾ ವಾದ್ರಾ ಅಬ್ಬರದ ಪ್ರಚಾರದ ಮಧ್ಯೆಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತ ಪಡೆದಿದ್ದು, ಯೋಗಿ ಆದಿತ್ಯನಾಥ್ ಅವರು ಶೀಘ್ರದಲ್ಲೇ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಪಕ್ಷ ಬಹುಮತ ಪಡೆದರೂ 11 ಸಚಿವರು ಏಕೆ ಚುನಾವಣೆಯಲ್ಲಿ ಸೋಲನುಭವಿಸಿದರು ಎಂಬುದು ಬಿಜೆಪಿ ನಾಯಕರಿಗೀಗ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
ಅದರಲ್ಲೂ, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವ ಸುರೇಶ್ ರಾಣಾ ಅವರಂತಹ ಪ್ರಬಲ ನಾಯಕರು ಸೋಲನುಭವಿಸಿದ್ದು ಚಿಂತೆಗೀಡು ಮಾಡಿದೆ. ಇವರ ಜತೆಗೆ ಇತರ ಸಚಿವರಾದ ರಾಜೇಂದ್ರ ಪ್ರತಾಪ್ ಸಿಂಗ್, ಚಂದ್ರಿಕಾ ಪ್ರಸಾದ್, ಆನಂದ್ ಸ್ವರೂಪ್ ಶುಕ್ಲಾ, ಉಪೇಂದ್ರ ತಿವಾರಿ, ಸತೀಶ್ ದ್ವಿವೇದಿ, ಲಖನ್ ಸಿಂಗ್, ರಣವೇಂದ್ರ ಸಿಂಗ್, ಸೇರಿ ಯೋಗಿ ಸಂಪುಟದ 11 ಸಚಿವರು ಚುನಾವಣೆಯಲ್ಲಿ ಸೋಲನುಭವಿಸಿರುವ ಕುರಿತು ಪಕ್ಷದಲ್ಲಿ ಪರಾಮರ್ಶೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಚಿವರ ಸೋಲು ಪಕ್ಷಕ್ಕೆ ಹಿನ್ನಡೆಯೆಂದೇ ಭಾವಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನಾಯಾಸವಾಗಿ ಸಿಕ್ಕ 20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣ ಸಿಬ್ಬಂದಿ
ಉತ್ತರ ಪ್ರದೇಶ ಮಾತ್ರವಲ್ಲ ಪಂಜಾಬ್, ಉತ್ತರಾಖಂಡದಲ್ಲೂ ಗಣ್ಯಾತಿಗಣ್ಯರು ಚುನಾವಣೆಯಲ್ಲಿ ಪರಾಜಿತರಾಗಿದ್ದಾರೆ. ಅದರಲ್ಲೂ, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಸೋಲುಂಡಿದ್ದಾರೆ.
ಹಾಗೆಯೇ, ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು ಸಹ ಸೋಲನುಭವಿಸಿರುವ ಕುರಿತು ಆಯಾ ಪಕ್ಷಗಳಲ್ಲಿ ಭಾರಿ ಚರ್ಚೆ ಹಾಗೂ ಅವಲೋಕನಕ್ಕೆ ಗ್ರಾಸವಾಗಿದೆ.