
ಅಮರಾವತಿ: ಧರ್ಮಾಧಾರಿತ ಮೀಸಲಾತಿ ನೀತಿ ಬಗ್ಗೆ ಬಿಜೆಪಿ ವಿರೋಧದ ನಡುವೆ ಆಂಧ್ರಪ್ರದೇಶದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಟಿಡಿಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ಮುಂದುವರೆಸುವುದಾಗಿ ಘೋಷಿಸಿದೆ.
ಇದು ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ಎನ್.ಡಿ.ಎ. ಮೈತ್ರಿ ಪಕ್ಷಗಳಾಗಿರುವ ಬಿಜೆಪಿ ಮತ್ತು ಟಿಡಿಪಿ ನಡುವೆ ಭಿನ್ನಮತಕ್ಕೆ ದಾರಿ ಮಾಡಿಕೊಟ್ಟಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಭಾನುವಾರ ಧರ್ಮಾವರಂನಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿ, ಆರಂಭದಿಂದಲೂ ನಾವು ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ಬೆಂಬಲಿಸಿಕೊಂಡು ಬಂದಿದ್ದೇವೆ. ಅದು ಹಾಗೆಯೇ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತೆಲಂಗಾಣದ ಜಹಿರಾಬಾದ್ ನಲ್ಲಿ ಓಬಿಸಿಗಳ ಮೀಸಲಾತಿ ಕಸಿದು ಯಾವುದೇ ಕಾರಣಕ್ಕೂ ಅದನ್ನು ಮುಸ್ಲಿಮರಿಗೆ ನೀಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಕಳೆದ 15 ದಿನಗಳಿಂದ ದೇಶವ್ಯಾಪಿ ಅನೇಕ ರಾಜ್ಯಗಳಲ್ಲಿ ಇದೇ ಹೇಳಿಕೆಯನ್ನು ಮೋದಿ ಪುನರುಚ್ಚರಿಸಿದ್ದರು. ಇದರ ಹೊರತಾಗಿಯೂ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಮುಸ್ಲಿಂ ಮೀಸಲಾತಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನ ಸೇನಾ, ಬಿಜೆಪಿ ಮೈತ್ರಿ ಮಾಡಿಕೊಂಡು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿವೆ. ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಮುಸ್ಲಿಂ ಮೀಸಲಾತಿ ವಿಚಾರ ಪ್ರಸ್ತಾಪ ಮಾಡಿರಲಿಲ್ಲ. ಈಗ ಚುನಾವಣೆ ಪ್ರಚಾರದ ವೇಳೆ ಚಂದ್ರಬಾಬು ನಾಯ್ಡು ಮುಸ್ಲಿಂ ಮೀಸಲಾತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಮೀಸಲಾತಿಗೆ ಮೋದಿ ವಿರೋಧದ ನಡುವೆ ನಾಯ್ಡು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.