ಶಿವಮೊಗ್ಗ: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದಲ್ಲಿ ಬಿಜೆಪಿ ನಾಯಕರು ತಾವು ಬಚಾವಾಗಲು ಕಾಂಗ್ರೆಸ್ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಲಬುರ್ಗಿ ನಗರದ ಬಿಜೆಪಿ ನಾಯಕಿಗೆ ಸೇರಿದ ಶಾಲೆಯಲ್ಲಿಯೇ ಪರೀಕ್ಷಾ ಅಕ್ರಮ ನಡೆದಿದೆ. ಆಕೆ ತಲೆಮರೆಸಿಕೊಂಡಿದ್ದಾಳೆ. ಆಕೆ ಪತಿಯನ್ನು ಬಂಧಿಸಿದ್ದಾರೆ. ಬಿಜೆಪಿ ನಾಯಕರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂದರು.
ಇದೇ ವೇಳೆ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ನಾನು ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ. ಆದರೆ ಗಲಾಟೆ ಮಾಡಿದ್ದು, ನಿಷೇಧಾಜ್ಞೆ ಇದ್ದರೂ ಶವಯಾತ್ರೆ ಮಾಡಿದ್ದು ಯಾರು ? ಅವರಿಗೆ 25 ಲಕ್ಷ ಕೊಡಿಸಿದ್ದು ಯಾರು ? ಕೊಲೆಗಾರರು ಯಾರೇ ಆಗಲಿ ಕಠಿಣ ಶಿಕ್ಷೆ ಆಗಬೇಕು. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡಬಾರದು ಎಂದು ಗುಡುಗಿದರು.
ಹಿಜಾಬ್, ಹಲಾಲ್, ಜಟ್ಕಾ, ಆಜಾನ್ ಈ ವಿಚಾರ ಹುಟ್ಟು ಹಾಕಿದ್ದು ಯಾರು ? ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಯಾರು ? ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜನರ ಭಾವನೆಗಳನ್ನು ಕೆರಳಿಸುವುದು ಸಂಘ ಪರಿವಾರದವರು. ಬಜರಂಗದಳ, ಆರ್ ಎಸ್ ಎಸ್ , ಶ್ರೀರಾಮಸೇನೆ ಇವರಿಂದ ಅಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಕಿಡಿಕಾರಿದರು.