ಗುವಾಹಟಿ: ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನವಜಾತ ಶಿಶುವನ್ನು ಬದಲಾಯಿಸಲಾಗಿತ್ತು. ಇದಾಗಿ ಮೂರು ವರ್ಷದ ಬಳಿಕ ಆ ಮಗು ತಾಯಿ ಮಡಿಲು ಸೇರಿದ ವಿರಳ ವಿದ್ಯಮಾನ ನಡೆದಿದೆ.
ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಇದು. ಈ ತಾಯಿಯ ಹೆಸರು ನಜ್ಮಾ ಖಾನಂ. ಮೂರು ವರ್ಷ ಹಿಂದೆ ಬಾರ್ಪೇಟಾದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಪ್ರಸವಕ್ಕೆಂದು ದಾಖಲಾಗಿದ್ದರು.
2019ರ ಮೇ 3ರಂದು ಒಂದೇ ದಿನ ಇಬ್ಬರು ಗರ್ಭಿಣಿಯರು ಪ್ರಸವಿಸಿದ್ದರು. ಆ ಪೈಕಿ ನಜ್ಮಾ ಖಾನಂ ಒಬ್ಬರು. ಇನ್ನೊಬ್ಬಾಕೆಯ ಮಗು ಮೃತಪಟ್ಟಿತ್ತು. ನಜ್ಮಾರ ಮಗುವನ್ನು ಶಿಶು ಐಸಿಯುನಲ್ಲಿ ಇರಿಸಲಾಗಿತ್ತು. ಮೂರು ದಿನಗಳ ಬಳಿಕ ನಜ್ಮಾಗೆ ಮೃತ ಶಿಶುವಿನ ಶರೀರವನ್ನು ಆಸ್ಪತ್ರೆ ಸಿಬ್ಬಂದಿ ಹಸ್ತಾಂತರಿಸಿದ್ದರು. ಇನ್ನೊಬ್ಬ ತಾಯಿಗೆ ನಜ್ಮಾರ ಮಗುವನ್ನು ಹಸ್ತಾಂತರಿಸಿದ್ದರು. ಆ ತಾಯಿಯ ಹೆಸರು ನಜ್ಮಾ ಖಾತುನ್.
ನಜ್ಮಾ ಖಾನಂ ಕುಟುಂಬ ಕೋರ್ಟ್ ಮೊರೆ ಹೋಯಿತು. ಡಿಎನ್‌ಎ ಪರೀಕ್ಷೆ ನಡೆಸಿದ ಬಳಿಕ ಮಗು ನಜ್ಮಾ ಖಾನಂದು ಎಂಬುದು ದೃಢಪಟ್ಟಿತು. ಹಾಗೆ ಮೂರು ವರ್ಷದ ಬಳಿಕ ಕೋರ್ಟ್ ನಿರ್ದೇಶನದ ಮೇರೆಗೆ ನಜ್ಮಾ ಖಾನಂಗೆ ಮಗು ಮತ್ತೆ ಸಿಕ್ಕಿದೆ.
ವಾರದ ಮೊದಲ ದಿನವೇ ಹೂಡಿಕೆದಾರರಿಗೆ ಶಾಕ್: ಸೆನ್ಸೆಕ್ಸ್ 1,300 ಅಂಕ ಕುಸಿತ
ನಜ್ಮಾಖಾನಂ ಕುಟುಂಬ ಸದಸ್ಯರು ಬಾರ್ಪೇಟಾ ಪೊಲೀಸ್ ಠಾಣೆಯಲ್ಲಿ ಅಂದೇ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) (ಕ್ರಿಮಿನಲ್ ಪಿತೂರಿ), 363 (ಅಪಹರಣಕ್ಕೆ ಶಿಕ್ಷೆ) ಅಡಿಯಲ್ಲಿ ಬಾರ್ಪೇಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯು 2020ರ ಅಕ್ಟೋಬರ್ 8 ರಂದು ಡಿಎನ್‌ಎ ಪರೀಕ್ಷೆಗಾಗಿ ಬಾರ್ಪೇಟಾ ಕೋರ್ಟ್‌ಗೆ ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಇದನ್ನು ಕೋರ್ಟ್ ಪುರಸ್ಕರಿಸಿತ್ತು. ಡಿಎನ್‌ಎ ಪರೀಕ್ಷೆ ವರದಿ ಪಾಸಿಟಿವ್ ಬಂತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಮಗುವನ್ನು ಮೂಲ ತಾಯಿಗೆ ಹಸ್ತಾಂತರಿಸಲಾಯಿತು.
ಆಸ್ಪತ್ರೆ ಸಿಬ್ಬಂದಿ ಹೆಸರಿನ ಸಾಮ್ಯತೆ ಕಾರಣ ಗೊಂದಲಕ್ಕೀಡಾಗಿ ಈ ರೀತಿ ಮಾಡಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಇದನ್ನು ಕೋರ್ಟ್ ಗಮನಕ್ಕೂ ಪೊಲೀಸರು ತಂದಿದ್ದಾರೆ.