ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾದ್ಮೇಲೆ ಅಲ್ಲಿನ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಜೊತೆಗೆ ಅಲ್ಲಿನ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತು, ಮಾರಾಟಗಾರರೂ ಬದಲಾಗಿದ್ದಾರೆ. ಅಲ್ಲಿನ ಮಾರುಕಟ್ಟೆಯಲ್ಲಿ ಈಗ ಅಮೆರಿಕಾ ಸೈನಿಕರ ಡ್ರೆಸ್ ನಿಂದ ಹಿಡಿದು ಅವರು ಬಳಸುವ ಅನೇಕ ವಸ್ತುಗಳು ಸಿಗ್ತಿವೆ.
ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಹೆಸರಿನ ಮಾರುಕಟ್ಟೆಯೊಂದು ಇಲ್ಲಿದೆ. ಬುಷ್ ಬಜಾರ್ ಎಂದೇ ಅದು ಪ್ರಸಿದ್ಧಿ ಪಡೆದಿದೆ. ಈ ಮಾರುಕಟ್ಟೆ ಚಿತ್ರಣ ಈಗ ಬದಲಾಗಿದೆ. ಈ ಮಾರುಕಟ್ಟೆಯಲ್ಲಿ ನೈಟ್ ವಿಜನ್ ಗ್ಲಾಸ್ ಸೇರಿದಂತೆ ಲೇಜರ್ ಲೈಟ್, ಟಾರ್ಚ್ ಕೂಡ ಸಿಗ್ತಿದೆ.
ಅಫ್ಘಾನಿಸ್ತಾನಕ್ಕೆ ಅಮೆರಿಕಾ 5 ಲಕ್ಷ ಬಂದೂಕುಗಳನ್ನು ನೀಡಿತ್ತು. ಇದೆಲ್ಲವೂ ಮಾರುಕಟ್ಟೆಯಲ್ಲಿ ಮಾರಾಟವಾಗ್ತಿದೆ. ಇದಕ್ಕೆ ಬೇಡಿಕೆ ಜಾಸ್ತಿಯಿದೆ. ಮಾರುಕಟ್ಟೆಯಲ್ಲಿ ತಾಲಿಬಾನಿ ಭಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲು ಅಮೆರಿಕಾ ಸೈನಿಕರು ಈ ಮಾರುಕಟ್ಟೆಗೆ ಬರ್ತಿದ್ದರಂತೆ. ಈಗ ತಾಲಿಬಾನಿಗಳು ಬರ್ತಿದ್ದು, ಭಯವಾಗುತ್ತೆ ಎಂದು ಮಾರುಕಟ್ಟೆ ವ್ಯಾಪಾರಿಗಳು ಹೇಳ್ತಿದ್ದಾರೆ.
ತಮಗಿಷ್ಟವಿಲ್ಲದ ವಸ್ತುಗಳನ್ನು ತಾಲಿಬಾನಿಗಳು ಮುರಿದು ಎಸೆಯುತ್ತಾರೆ. ಇದ್ರಲ್ಲಿ ಸಂಗೀತವೂ ಸೇರಿದೆ. ಸಂಗೀತ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಭಾವಿಸಿರುವ ಅವರು ಅದನ್ನು ಬಳಸಲು ಅನುಮತಿ ನೀಡುವುದಿಲ್ಲ.
2001ರಲ್ಲಿ ಬುಷ್, ಅಫ್ಘಾನಿಸ್ತಾನಕ್ಕೆ ಅಮೆರಿಕಾ ಸೈನಿಕರನ್ನು ಕಳುಹಿಸಿದ್ದರು. ಅದ್ರ ನಂತ್ರ ಮಾರುಕಟ್ಟೆಗೆ ಬುಷ್ ಬಜಾರ್ ಎಂದು ಹೆಸರು ಬಂತು. ಅಲ್ಲಿ ಮಿಲಿಟರಿ ಶೂ ಪ್ರಸಿದ್ಧಿ ಪಡೆದಿದೆ.