ನಮ್ಮ ದೇಶದ ರಸ್ತೆಗಳ ಕಳಪೆ ಗುಣಮಟ್ಟದ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದಲೇ ಅತೀ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ. ಕೇರಳದ ತ್ರಿಶೂರ್ನ ಅಯ್ಯಂತೋಳೆ ಎಂಬಲ್ಲಿ ಹಾರುತ್ತಿದ್ದ ನವಿಲೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನು 34 ವರ್ಷದ ಪ್ರಮೋಶ್ ಎಂದು ಗುರುತಿಸಲಾಗಿದೆ. ಪತ್ನಿಯನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ. ನವಿಲು ಬಡಿದ ಪರಿಣಾಮ ಪ್ರಮೋಶ್ ಬೈಕ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಪರಿಣಾಮವಾಗಿ ಪತಿ – ಪತ್ನಿಯಿಬ್ಬರೂ ರಸ್ತೆ ಮೇಲೆ ಬಿದ್ದಿದ್ದಾರೆ.
ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರಮೋಶ್ ಸಾವನ್ನಪ್ಪಿದ್ದಾರೆ. ಪತ್ನಿಯ ಸ್ಥಿತಿ ಗಂಭೀರವಾಗಿದೆ. ಈ ದಂಪತಿ 6 ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ.
ಅಂದಹಾಗೆ ಈ ಅಪಘಾತದಲ್ಲಿ ನವಿಲು ಕೂಡ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.