ರಾಯಚೂರು: ಅಪರಿಚಿತ ವ್ಯಕ್ತಿಗಳು ಆತ್ಮೀಯವಾಗಿ ಮಾತನಾಡಿ ಕೊಡುವ ವಸ್ತುಗಳನ್ನು ಸ್ವೀಕರಿಸುವ ಮುನ್ನ ಈ ಸ್ಟೋರಿ ಎಲ್ಲರೂ ಓದಲೇಬೇಕು. ಇಲ್ಲೊಂದು ದಂಪತಿ ಬಿಸ್ಕೆಟ್ ಕೊಟ್ಟು ಮಗುವನ್ನೇ ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಿಸ್ಕೆಟ್ ನಲ್ಲಿ ಮತ್ತುಬರುವ ಔಷಧ ಹಾಕಿ ಕೊಟ್ಟು ಮೂರು ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿದ್ದು, ಪ್ರಕರಣ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ. ರಾಯಚೂರಿನಲ್ಲಿ ಈ ಘಟನೆ ನಡೆದಿದೆ.
ರಾಯಚೂರಿನಿಂದ ಬೆಂಗಳೂರಿಗೆ ಉದ್ಯಾನ ಎಕ್ಸ್ ಪ್ರೆಸ್ ರೈಲಿನಲ್ಲಿ ದೇವದುರ್ಗದ ಬಂಡೆಗುಡ್ಡ ತಾಂಡಾದ ಪ್ರಕಾಶ್ ಹಾಗೂ ಹಂಪಮ್ಮ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರ್ಗಿ ಮೂಲದ ದಂಪತಿ ರೂಪೇಶ್ ಹಾಗೂ ಕುಸುಮ ಪ್ರಯಾಣಿಸುತ್ತಿದ್ದರು. ರೈಲಿನಲ್ಲಿ ಅಕ್ಕಪಕ್ಕದ ಸೀಟಿನಲ್ಲಿ ಎರಡೂ ದಂಪತಿ ಜೊತೆಯಾಗಿದ್ದಾರೆ. ದೂರದ ಪ್ರಯಾಣ ಹಾಗಾಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ದಂಪತಿ ಜೊತೆ ಸಹಜವಾಗಿಯೇ ಮಾತುಕತೆ ನಡೆದಿದೆ.
ರೂಪೇಶ್ ಹಾಗೂ ಕುಸುಮಾ ದಂಪತಿ, ಪ್ರಕಾಶ್ ಹಾಗೂ ಹಂಪಮ್ಮ ದಂಪತಿಯ ಮೂರು ವರ್ಷದ ಮಗುವಿನೊಂದಿಗೆ ಮಾತನಾಡುತ್ತಾ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ. ರಾತ್ರಿ ರೈಲಿನಲ್ಲಿ ಮಲಗುವ ವೇಳೆ ಮಗುವಿಗೆ ಬಿಸ್ಕೆಟ್ ಕೊಟ್ಟಿದ್ದಾರೆ. ಮಗುವಿನ ತಂದೆ-ತಾಯಿ ರಾತ್ರಿ ನಿದ್ರೆಗೆ ಜಾರುತ್ತಿದ್ದಂತೆ ಮಗುವನ್ನು ಎತ್ತಿಕೊಂಡು ಅನಂತಪುರ ರೈಲು ನಿಲ್ದಾಣದಲ್ಲಿ ಇಳಿದು ಎಸ್ಕೇಪ್ ಆಗಿದ್ದಾರೆ.
ಅಲ್ಲಿಂದ ಮಗುವನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಮಂತ್ರಾಲಯಕ್ಕೆ ಕರೆದೊಯ್ದು ಅಲ್ಲಿ ಮಗುವಿನ ಕೂದಲು ಕತ್ತರಿಸಿದ್ದಾರೆ. ಬಳಿಕ ರಾಯಚೂರು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ದಂಪತಿ ಹಾಗೂ ಮಗು ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಿಸಿದಾಗ ಮಗು ಕಿಡ್ನ್ಯಾಪ್ ಮಾಡಿ ಕರೆದೊಯ್ಯುತ್ತಿರುವುದು ಬಹಿರಂಗವಾಗಿದೆ.
ದಂಪತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮದುವೆಯಾಗಿ 22 ವರ್ಷವಾದರೂ ಮಕ್ಕಳಿರಲಿಲ್ಲ. ಹಾಗಾಗಿ ಮಗುವನ್ನು ಕದ್ದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮಗು ಕದಿಯುವ ಮೊದಲು ತಂದೆ-ತಾಯಿಗೆ ದಂಪತಿ ಮೊಬೈಲ್ ನಂಬರ್ ಕೊಟ್ಟಿದ್ದರಂತೆ. ಕಾರಣ ಯಾವುದಾದರೂ ಮಗು ಇದ್ದರೆ ಹೇಳಿ ದತ್ತು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರಂತೆ. ಮಗು ಕಾಣೆಯಾದಾಗ ಮಗುವಿನ ತಂದೆ-ತಾಯಿ ಈ ಮೊಬೈಲ್ ನಂಬರ್ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ನಂಬರ್ ಟ್ರೇಸ್ ಮಾಡಿದಾಗ ರಾಯಚೂರು ಬಸ್ ನಿಲ್ದಾಣದಲ್ಲಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.