ಗದಗ: ಗದಗದ ಕೊನೇರಿ ಹೊಂಡದಲ್ಲಿ ಭಾನುವಾರ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಬಾಲಕ ಪ್ರಥಮ್ ಶವವನ್ನು ಅಗ್ನಿಶಾಮಕದಳದ ಸಿಬ್ಬಂದಿ ಸೋಮವಾರ ಹೊರ ತೆಗೆದಿದ್ದಾರೆ.
ಭಾನುವಾರ ಮಧ್ಯಾಹ್ನ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ವೇಳೆ ಪ್ರಥಮ್ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಆತನೊಂದಿಗೆ ಇದ್ದ ಇಬ್ಬರು ಬಾಲಕರು ಕಿರುಚಾಡಿ ಜನರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಹುಡುಕಾಟ ನಡೆಸಿದ್ದಾರೆ,
ಆದರೆ ಹೊಂಡದಲ್ಲಿ ಕೆಸರು ತುಂಬಿದ್ದರಿಂದ ಬಾಲಕ ಪತ್ತೆಯಾಗಿರಲಿಲ್ಲ. ಸೋಮವಾರ ಸತತ ಕಾರ್ಯಾಚರಣೆ ನಡೆಸಿ ಮೃತದೇಹ ಹೊರ ತೆಗೆಯಲಾಗಿದೆ. ಸೆ. 30ರಂದು ಬಾಲಕ ಪ್ರಥಮ್ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನಗಳಿಂದ ತಯಾರಿ ನಡೆಸಿದ್ದರು. ಆದರೆ, ಜನ್ಮದಿನದಂದೇ ಪ್ರಥಮ್ ಶವವಾಗಿ ಪತ್ತೆಯಾಗಿದ್ದಾನೆ. ತಂದೆ, ತಾಯಿ ಕಳೆದುಕೊಂಡಿದ್ದ ಪ್ರಥಮ್ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ. ಅಕಾಲಿಕವಾಗಿ ಮೊಮ್ಮಗನ ಸಾವಿನಿಂದ ಅಜ್ಜಿ ಆಕ್ರಂದನ ಮುಗಿಲು ಮುಟ್ಟಿದ್ದು, ಜನ ಕೂಡ ಕಂಬನಿ ಮಿಡಿದಿದ್ದಾರೆ.