ಖ್ಯಾತ ಬಂಗಾಳಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ಗೆ ಕಳೆದ ತಿಂಗಳು ಮಗು ಜನಿಸಿದ ಬಳಿಕ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಎಲ್ಲೆಡೆ ಹರಿದಾಡಿತ್ತು.
ಆದರೆ ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನುಸ್ರತ್ ಜಹಾನ್ ಉತ್ತರ ನೀಡಿದ್ದಾರೆ. ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ತಂದೆಯ ಹೆಸರಿನ ಜಾಗದಲ್ಲಿ ಬಂಗಾಳಿ ನಟ ಯಶ್ ದಾಸ್ ಗುಪ್ತಾ ಹೆಸರು ನಮೂದಾಗಿದೆ.
ಟಿಎಂಸಿ ಸಂಸದೆ ನುಸ್ರತ್ ಜಹಾನ್ ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ತಂದೆಯ ಹೆಸರನ್ನು ಬಹಿರಂಗ ಮಾಡಲು ನಿರಾಕರಿಸಿದ್ದರು.
ಇದಾದ ಬಳಿಕ ಈ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.
ನವಜಾತ ಶಿಶುವಿನ ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ಯಿಶಾನ್ ಕೆ ದಾಸ್ಗುಪ್ತಾ ಎಂದು ತಂದೆಯ ಹೆಸರನ್ನು ದೇಬಾಶಿಶ್ ದಾಸ್ ಗುಪ್ತಾ ಎಂದು ಬರೆಯಲಾಗಿದೆ. ದೇಬಾಶಿಶ್ ದಾಸ್ ಗುಪ್ತಾ ಬಂಗಾಳಿ ನಟ ಯಶ್ ದಾಸ್ಗುಪ್ತಾರ ಹೆಸರಾಗಿದೆ.
ಕೊಲ್ಕತ್ತಾದ ಭಾಗೀರತಿ ನಿಯೋಟಿಯಾ ಆಸ್ಪತ್ರೆಯಿಂದ ನುಸ್ರತ್ ಡಿಸ್ಚಾರ್ಜ್ ಆಗಿದ್ದ ವೇಳೆ ಯಶ್ ನವಜಾತ ಶಿಶುವನ್ನು ತೋಳಲ್ಲಿ ಎತ್ತುಕೊಂಡು ಹೋಗುತ್ತಿದ್ದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು.
2019ರಲ್ಲಿ ನಿಖಿಲ್ ಜೈನ್ ಜೊತೆ ನುಸ್ರತ್ ಜಹಾನ್ ವಿವಾಹವಾಗಿದ್ದರು. ಆದರೆ ಭಾರತೀಯ ಕಾನೂನಿನ ಪ್ರಕಾರ ಈ ವಿವಾಹ ಅಸಿಂಧು ಎಂದು ಹೇಳಿದಾಗ ಈ ವರ್ಷದ ಆರಂಭದಲ್ಲಿ ಇದೊಂದು ಭಾರೀ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು.