ಚಾಮರಾಜನಗರ: ತಂಗಳು ಬಿರಿಯಾನಿ ಸೇವಿಸಿ 25 ಕೂಲಿ ಕಾರ್ಮಿಕರು ಅಸ್ವಸ್ಥರಾದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ ನಿನ್ನೆ ಬಿರಿಯಾನಿ ಸೇವಿಸಿ ಕಾರ್ಮಿಕರು ಅಸ್ವಸ್ಥಗಿದ್ದಾರೆ.
ಜುಲೈ 18ರಂದು ಅರೆಪಾಳ್ಯದಲ್ಲಿ ಬಿರಿಯಾನಿ ಮಾಡಿಸಲಾಗಿತ್ತು. ಸಂತೋಷ್ ಎಂಬುವರು ಚಿಕನ್ ಬಿರಿಯಾನಿ ಮಾಡಿಸಿದ್ದರು. ಮಗನ ಹುಟ್ಟುಹಬ್ಬದ ಪ್ರಯುಕ್ತ ಅವರು ಬಿರಿಯಾನಿ ಮಾಡಿಸಿದ್ದು, ಸ್ನೇಹಿತರು, ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಜಮೀನಿಗೆ ಕಬ್ಬು ಕಟಾವಿಗೆಂದು ಬಂದಿದ್ದ ಕಾರ್ಮಿಕರಿಗೆ ತಂಗಳು ಬಿರಿಯಾನಿ ನೀಡಿದ್ದರು. ತಂಗಳು ಬಿರಿಯಾನಿ ತಿಂದು ಕಾರ್ಮಿಕರಿಗೆ ವಾಂತಿ ಭೇದಿಯಾಗಿದ್ದು, ಅಸ್ವಸ್ಥ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.