
ಮಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದ್ದ ವಿಕೃತರ ವಿರುದ್ಧ ದೇಶದ ಹಲವೆಡೆ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿಯೂ ಇಂತಹ ವಿಕೃತ ಮನಸ್ಥಿತಿಯವರ ವಿರುದ್ಧ ಮೊದಲ ಪ್ರಕರಣ ದಾಖಲಾಗಿದೆ.
ಮಂಗಳೂರು ಠಾಣೆಯಲ್ಲಿ ಸೇನಾಧಿಕಾರಿಗಳ ಸಾವಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಸುಶಾಂತ್ ಎಂಬುವರು ದೂರು ನೀಡಿದ್ದು, ಇದರ ಆಧಾರದ ಮೇಲೆ ಪಾಂಡೇಶ್ವರ ಠಾಣಾ ಪೊಲೀಸರು ಬೆಂಗಳೂರು, ಮಂಗಳೂರು ಮತ್ತು ಕಾರ್ಕಳ ಮೂಲದ ಮೂವರ ವಿರುದ್ದ ಕೇಸು ದಾಖಲಿಸಿದ್ದಾರೆ.
ಬಿಪಿನ್ ರಾವತ್ ಸಾವಿನ ಬಗ್ಗೆ ಪ್ರಸ್ತಾಪಿಸಿ, ದೇಶ ಪಾರಾಗಿದೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸರದಿ ಯಾವಾಗ ಎನ್ನುವ ಅರ್ಥದಲ್ಲಿ ಅನೇಕ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಲಾಗಿತ್ತು. ಅವರ ವಿರುದ್ಧ ಪ್ರಚೋದನೆ, ರಾಷ್ಟ್ರ ದ್ರೋಹ, ಜನರಲ್ಲಿ ದ್ವೇಷ ಭಾವನೆ ಕೆರಳಿಸುವುದು ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ನಡಿ ಪ್ರಕರಣ ದಾಖಲಿಸಿದ್ದು, ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.