12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ಕೊoರೋನಾ ವೈರಸ್ ವಿರುದ್ಧ ಶೇಕಡ 100 ರಷ್ಟು ಪರಿಣಾಮಕಾರಿತ್ವವನ್ನು ಲಸಿಕೆ ಉಂಟು ಮಾಡಿದೆ ಎಂದು ಬಯೋನ್ ಟೆಕ್-ಫಿಜರ್ ತಿಳಿಸಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೊದಲು ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ಸಿಗುವ ಸಾಧ್ಯತೆ ಇದೆ.
ಯುನೈಟೆಡ್ ಸ್ಟೇಟ್ಸ್ ನಲ್ಲಿ 2260 ಹದಿಹರೆಯದ ಮಕ್ಕಳ ಮೇಲೆ ನಡೆಸಿದ ಮೂರನೇ ಹಂತದ ಪ್ರಯೋಗದಲ್ಲಿ ಲಸಿಕೆಯು ಶೇಕಡ 100ರಷ್ಟು ಪರಿಣಾಮಕಾರಿಯಾಗಿ ಪ್ರತಿಕಾಯಗಳನ್ನು ಪ್ರದರ್ಶಿಸಿದೆ ಎಂದು ಬಯೋನ್ ಟೆಕ್, ಫಿಜರ್ ಕಂಪನಿಗಳು ಹೇಳಿವೆ.
ಮುಂದಿನ ವಾರಗಳಲ್ಲಿ 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಲಿದೆ. ತುರ್ತು ಬಳಕೆಗೂ ಅನುಮೋದನೆ ಸಿಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೂರಕವಾದ ಡೇಟಾವನ್ನು ಎಫ್ಡಿಐಗೆ ಸಲ್ಲಿಸಲು ಯೋಜಿಸಲಾಗಿದೆ ಎಂದು ಫಿಜರ್ ಮುಖ್ಯ ಕಾರ್ಯನಿರ್ವಾಹಕ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.
ಜರ್ಮನ್ ಕಂಪನಿಯ ಬಯೋನ್ ಟೆಕ್ ಮುಖ್ಯಕಾರ್ಯನಿರ್ವಾಹಕ ಈ ಬಗ್ಗೆ ಮಾತನಾಡಿ, ಹದಿಹರೆಯದವರಲ್ಲಿ ಲಸಿಕೆ ಪ್ರೋತ್ಸಾಹದಾಯಕವಾಗಿದೆ. ಬಯೋಟೆಕ್ ಮತ್ತು ಫಿಜರ್ ನಿಂದ ಕೋವಿಡ್ ರೂಪಾಂತರ ಸೋಂಕು ನಿಯಂತ್ರಣದ ಬಗ್ಗೆಯೂ ಅಧ್ಯಯನ ಕೈಗೊಂಡಿದ್ದು ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಮತ್ತು ಯೂರೋಪಿಯನ್ ಯೂನಿಯನ್ ನಲ್ಲಿ 16 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಬಳಕೆಗೆ ಅನುಮೋದನೆ ನೀಡಲಾಗಿದೆ. ಲಸಿಕೆಯನ್ನು ಬೆಲ್ಜಿಯಂನ ಫಿಜರ್ ಸ್ಥಾವರದಲ್ಲಿ ಮತ್ತು ಯುನೈಟೆಡ್ ಸ್ಟೇಟ್ಸ್ 3 ತಾಣಗಳಲ್ಲಿ ಉತ್ಪಾದಿಸಲಾಗುತ್ತಿದೆ. ಎರಡರಿಂದ 11 ವರ್ಷದ ಮಕ್ಕಳ ಮೇಲೆ ಲಸಿಕೆ ನೀಡಲಾಗಿದೆ. ಎರಡರಿಂದ ಐದು ವರ್ಷದ ಮಕ್ಕಳಿಗೆ ಮುಂದಿನವಾರ ನೀಡಲಾಗುವುದು. 6 ತಿಂಗಳ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.