ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಹೊರತುಪಡಿಸಿ ಕಂದಾಯ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡ, ನಿವೇಶನಗಳನ್ನು ಪ್ರತ್ಯೇಕ ವಹಿಯಲ್ಲಿ ನೋಂದಾಯಿಸಿ ಮೊದಲ ವರ್ಷ ದುಪ್ಪಟ್ಟು ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ನಗರ ಸ್ಥಳೀಯ ಪ್ರಾಧಿಕಾರಗಳ ಅಡಿಯಲ್ಲಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಯಲ್ಲಿ ತರುವ ಉದ್ದೇಶದಿಂದ ಕರ್ನಾಟಕ ಮುನಿಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ಮಸೂದೆ-20 24 ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.
ಸರ್ಕಾರಿ ಭೂಮಿ ಹೊರತಾಗಿ ಅನಧಿಕೃತ ವಸತಿ ಪ್ರದೇಶಗಳಲ್ಲಿರುವ ನಿವೇಶನ, ಕಟ್ಟಡಗಳಿಗೆ ಅಧಿಕೃತ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಕಟ್ಟಡಗಳಿಗೆ ಸ್ವತ್ತು ತೆರಿಗೆ ವಸೂಲಿಗೆ ಈ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಕಾಮಗಾರಿ ಮುಕ್ತಾಯ ಪ್ರಮಾಣ ಪತ್ರ ಪಡೆಯದೇ ವಾಸಕ್ಕೆ ಬಳಸುತ್ತಿದ್ದರೆ ಮೊದಲ ವರ್ಷಕ್ಕೆ ಎರಡು ಪಟ್ಟು ಸ್ವತ್ತು ತೆರಿಗೆ ವಿಧಿಸಲು, ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆ ಮಾತ್ರ ವಿಧಿಸಲಾಗುವುದು.