ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಮಂಗಳವಾರ 27 ವರ್ಷಗಳ ದಾಂಪತ್ಯ ಜೀವನದಿಂದ ದೂರವಾಗವುದಾಗಿ ಘೋಷಿಸಿದ್ದಾರೆ.
ಇಬ್ಬರ ಸಮ್ಮತಿಯೊಂದಿಗೆ ಬೇರೆ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದೇ ಬರಹದ ಪೋಸ್ಟ್ ಮಾಡುವ ಮೂಲಕ ಅಧಿಕೃತವಾಗಿ ದಂಪತಿ ತಾವು ಬೇರೆಯಾಗುವ ಬಗ್ಗೆ ಘೋಷಿಸಿದ್ದಾರೆ. ಸುದೀರ್ಘ ಚರ್ಚೆಯ ನಂತರ ನಮ್ಮ ದಾಂಪತ್ಯ ಜೀವನ ಅಂತ್ಯಗೊಳಿಸಲು ನಿರ್ಧಾರ ಕೈಗೊಂಡಿದ್ದೇವೆ. ಕಳೆದ 27 ವರ್ಷದ ದಾಂಪತ್ಯದಲ್ಲಿ ಮೂವರು ಮಕ್ಕಳನ್ನು ಬೆಳೆಸಿದ್ದೇವೆ. ವಿಶ್ವದ ಜನರಿಗೆ ನೆರವಾಗಲು ದತ್ತಿ ಸಂಸ್ಥೆ ಸ್ಥಾಪಿಸಿದ್ದು, ಈ ಸಂಸ್ಥೆಯ ಕೆಲಸದಲ್ಲಿ ಸಂಪೂರ್ಣ ತೊಡಗಿಕೊಂಡು ಜೊತೆಯಾಗಿ ಕೆಲಸ ಮಾಡುತ್ತೇವೆ. ಆದರೆ, ಮುಂದಿನ ಹಂತದಲ್ಲಿ ನಾವು ದಂಪತಿಯಾಗಿ ಒಟ್ಟಿಗೆ ಮುಂದುವರೆಯಲು ಬಯಸುವುದಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
67 ವರ್ಷದ ಬಿಲ್ ಗೇಟ್ಸ್ ಮತ್ತು 56 ವರ್ಷದ ಮೆಲಿಂಡಾ ದಂಪತಿ ದೂರವಾಗುತ್ತಿರುವುದು ವಿಶ್ವದ ಗಮನ ಸೆಳೆದಿದೆ. ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್‌ನಲ್ಲಿ ಡೈವೋರ್ಸ್ ಗಾಗಿ ಅರ್ಜಿ ಸಲ್ಲಿವುದರೊಂದಿಗೆ ಅವರ ದಾಂಪತ್ಯ ಅಂತ್ಯವಾಗಿದೆ. ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಎರಡು ದಶಕಗಳ ಹಿಂದೆ ಪ್ರಾರಂಭವಾಯಿತು. ಇದು ವಿಶ್ವದ ಅತಿದೊಡ್ಡ ಖಾಸಗಿ ಲೋಕೋಪಕಾರಿ ಸಂಸ್ಥೆಯಾಗಿದ್ದು, 2019 ರ ಅಂತ್ಯದ ವೇಳೆಗೆ 43.3 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯನ್ನು ಹೊಂದಿತ್ತು ಎಂದು ವರದಿಯಾಗಿದೆ.