12 ವರ್ಷಗಳ ಬಳಿಕ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ. 2011ರಲ್ಲಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಭಾರತಕ್ಕೆ ಭೇಟಿ ನೀಡಿದ್ದು, ಇದೀಗ ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಶೃಂಗಸಭೆಯಲ್ಲಿ ಬಿಲಾವಲ್ ಭುಟ್ಟೋ ಪಾಲ್ಗೊಂಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ ಬಿಲಾವಲ್ ಭಾರತ ಭೇಟಿ ಬೆನ್ನಲ್ಲೇ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಭಾರತದ ಜೊತೆ ಸ್ನೇಹ ಸಂಬಂಧ ಹೊಂದಲು ಕಾತರಿಸುತ್ತಿರುವ ಪಾಕಿಸ್ತಾನ ಗಡಿ ಉಲ್ಲಂಘಿಸಿದ ಕಾರಣಕ್ಕೆ ತನ್ನ ಜೈಲುಗಳಲ್ಲಿರುವ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ ಒಟ್ಟು 600 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದ್ದು, ಮೇ 12 ರಂದು 200 ಮಂದಿ ಹಾಗೂ ಮೇ 14ರಂದು 400 ಮಂದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಮೂಲಕ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾರಣಕ್ಕೆ ಭಾರತ ತನ್ನ ಮೇಲೆ ಹೊಂದಿರುವ ಅಸಮಾಧಾನವನ್ನು ಒಂದಷ್ಟು ಕಡಿಮೆಗೊಳಿಸಲು ಪಾಕ್ ಚಿಂತಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಮೊದಲಿನಿಂದಲೂ ಭಾರತೀಯ ಮೀನುಗಾರರ ಬಿಡುಗಡೆಗೆ ಒತ್ತಡ ಹೇರುತ್ತಿದ್ದು, ಪಾಕಿಸ್ತಾನದ ಜೈಲುಗಳಲ್ಲಿ ಇರುವ ಒಟ್ಟು 705 ಮಂದಿ ಭಾರತೀಯರ ಪೈಕಿ 654 ಮಂದಿ ಮೀನುಗಾರರು ಎಂದು ಹೇಳಲಾಗಿದೆ. ಅದೇ ರೀತಿ ಭಾರತೀಯ ಜೈಲಿನಲ್ಲಿ 434 ಮಂದಿ ಪಾಕಿಸ್ತಾನಿಗಳಿದ್ದು, ಈ ಪೈಕಿ 95 ಮಂದಿ ಮೀನುಗಾರರು.
ಇದೀಗ 600 ಮಂದಿ ಮೀನುಗಾರರ ಬಿಡುಗಡೆ ಮಾಡಲು ಪಾಕಿಸ್ತಾನ ಮುಂದಾಗಿದ್ದು, ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ 200 ಮಂದಿಯನ್ನು ಈದಿ ಫೌಂಡೇಶನ್ ರಸ್ತೆ ಮಾರ್ಗದ ಮೂಲಕ ಲಾಹೋರ್ಗೆ ಕರೆ ತರಲಿದ್ದು, ಸಿಂಧ್ ಸರ್ಕಾರ 5,000 ನಗದಿನ ಜೊತೆಗೆ ಆಹಾರ ಹಾಗೂ ಉಡುಗೊರೆಗಳನ್ನು ನೀಡುತ್ತದೆ ಎಂದು ತಿಳಿದುಬಂದಿದೆ. ಬಳಿಕ ವಾಘಾ ಗಡಿಯಲ್ಲಿ ಭಾರತೀಯ ಯೋಧರಿಗೆ ಮೀನುಗಾರರನ್ನು ಒಪ್ಪಿಸಲಾಗುತ್ತದೆ.