ಪ್ರಧಾನಿ ಮೋದಿ ಅವರ ವಿರುದ್ಧ ಪಾಕ್ ಸಚಿವ ಬಿಲಾವಲ್ ಭುಟ್ಟೊ ಹೇಳಿಕೆ ಅವರನ್ನು ಕೆಳಗಿಳಿಸಿದೆ ಎಂದು ಸೂಫಿ ಕೌನ್ಸಿಲ್ ಪಾಕ್ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.
ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಅಧ್ಯಕ್ಷ ನಾಸಿರುದ್ದೀನ್ ಚಿಸ್ತಿ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ಹೇಳಿಕೆಯನ್ನು ಶನಿವಾರ ಖಂಡಿಸಿದ್ದಾರೆ. ಅವರು ಬಳಸಿದ ಭಾಷೆ ಅವರ ಸ್ಥಾನ ಮಾತ್ರವಲ್ಲದೇ, ಅವರ ಇಡೀ ರಾಷ್ಟ್ರದ ಸ್ಥಾನವನ್ನು ಕೆಳಗಿಳಿಸಿದೆ ಎಂದು ಹೇಳಿದ್ದಾರೆ.
ನಮ್ಮ ಪ್ರಧಾನಿ ಮತ್ತು ನಮ್ಮ ತಾಯ್ನಾಡಿನ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವರು ಬಳಸಿರುವ ವಿಷಕಾರಿ ಭಾಷೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಸಾಯಲಿಲ್ಲ, ಆದರೆ ಪಾಕಿಸ್ತಾನದ ಸರ್ಕಾರದ ಮೂಗಿನ ಕೆಳಗೆ ಪಾಕಿಸ್ತಾನದಲ್ಲಿ ಅಮೇರಿಕನ್ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾನೆ ಎಂಬುದನ್ನು ಬಿಲಾವಲ್ ಭುಟ್ಟೋ ಮರೆತಿದ್ದಾರೆ. ಭಾರತೀಯ ಮುಸ್ಲಿಮರು ತಮ್ಮ ಪಾಕಿಸ್ತಾನಿ ಸಹವರ್ತಿಗಳಿಗಿಂತ ಹೆಚ್ಚು ಸುರಕ್ಷಿತ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಿಸ್ತಿ ಹೇಳಿದರು.
ಭುಟ್ಟೋ ಭಾರತವನ್ನು ತನ್ನ ಅಸ್ಥಿರ ದೇಶದೊಂದಿಗೆ ಹೋಲಿಸಬಾರದು. ಏಕೆಂದರೆ ಭಾರತೀಯ ಸಂವಿಧಾನವು ಎಲ್ಲರಿಗೂ ಧರ್ಮದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದರು.
ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ದೇಶದ ವಿವಿಧ ದರ್ಗಾಗಳ ಆಧ್ಯಾತ್ಮಿಕ ಮುಖ್ಯಸ್ಥರ ಕೇಂದ್ರವಾಗಿದೆ.
ವಿವಿಧ ಭಯೋತ್ಪಾದಕ ಗುಂಪುಗಳಿಗೆ ನೆರೆಯ ರಾಷ್ಟ್ರ ಪಾಕಿಸ್ತಾನದ ಬೆಂಬಲವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಎತ್ತಿ ತೋರಿಸಿ ಪಾಕಿಸ್ತಾನ ದೇಶವನ್ನು “ಭಯೋತ್ಪಾದನೆಯ ಕೇಂದ್ರ” ಎಂದು ಬಣ್ಣಿಸಿದ ನಂತರ ಪಾಕಿಸ್ತಾನದ ವಿದೇಶಾಂಗ ಸಚಿವ ಭುಟ್ಟೊ, ಪ್ರಧಾನಿ ಮೋದಿ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದರು.