ನೆಲಮಂಗಲ: ಇತ್ತೀಚಿನ ದಿನಗಳಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಹಾವಳಿ ಹೆಚ್ಚಾಗಿದ್ದು, ತಮ್ಮ ಜೀವಕ್ಕೆ ತಾವು ಅಪಾಯ ತಂದುಕೊಳ್ಳುವುದೂ ಅಲ್ಲದೇ ಇತರ ವಾಹನ ಸವಾರರ ಹಾಗೂ ಸಾರ್ವಜನಿಕರ ಜೀವಕ್ಕೂ ಕುತ್ತು ತರುತ್ತಾರೆ. ಯುವಕ ಗುಂಪಿನ ವ್ಹೀಲಿಂಗ್ ಹುಚ್ಚಾಟಕ್ಕೆ ಬೇಸತ್ತ ಸಾರ್ವಜನಿಕರು, ಗ್ರಾಮಸ್ಥರು ಬೈಕ್ ಗಳನ್ನು ಕಿತ್ತುಕೊಂಡು 30 ಅಡಿ ಆಳಕ್ಕೆ ಎಸೆದಿರುವ ಘಟನೆ ತುಮಕೂರು ಹೈವೆಯಲ್ಲಿ ನಡೆದಿದೆ.
ಇಬ್ಬರು ಯುವಕರು ತುಮಕೂರು ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಾ ಮೊಬೈಲ್ ನಲ್ಲಿ ತಮ್ಮ ಸಾಹಸಕಾರಿ ಬೈಕ್ ರೈಡಿಂಗ್ ರೆಕಾರ್ಡ್ ಮಾಡುತ್ತಿದ್ದರು. ಅಷ್ಟೇ ಅಲ್ಲ ಇತರ ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದರು. ಬೈಕ್ ವ್ಹೀಲರ್ ಗಳ ಹುಚ್ಚಾಟಕ್ಕೆ ಬೇಸತ್ತು ರೊಚ್ಚಿಗೆದ್ದ ಸಾರ್ವಜನಿಕರು ಹಾಗೂ ಅದೇ ಮಾರ್ಗವಾಗಿ ಹೋಗುತ್ತಿದ್ದ ಕೆಲವರು ಇಬ್ಬರು ಬೈಕ್ ವ್ಹೀಲರ್ ಗಳನ್ನು ಹಿಡಿದು ಬುದ್ಧಿ ಕಲಿಸಿದ್ದಾರೆ.
ಪುಂಡರಿಂದ ಬೈಕ್ ಕಿತ್ತುಕೊಂಡು ಫ್ಲೈಓವರ್ ಮೇಲಿನಿಂದ 30 ಅಡಿ ಆಳಕ್ಕೆ ಬೈಕ್ ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ಬಾರಿ ವಾರ್ನಿಂಗ್ ಕೊಟ್ಟರೂ, ಪೊಲೀಸರು ಎಚ್ಚರಿಸಿ ಕ್ರಮ ಕೈಗೊಂಡರೂ ಪುಂಡರ ವ್ಹೀಲಿಂಗ್ ಕ್ರೇಜ್ ಗೆ ಮಾತ್ರ ಕಡಿವಾಣ ಬಿದ್ದಿಲ್ಲ. ಇದೀಗ ತುಮಕೂರು ಹೈವೆಯಲ್ಲಿ ಸಾರ್ವಜನಿಕರೇ ವ್ಹೀಲರ್ ಗಳಿಗೆ ಪಾಠ ಕಲಿಸಿದ್ದು, ಇಗಲಾದರೂ ವ್ಹೀಲಿಂಗ್ ಹುಚ್ಚಾಟ ನಿಲ್ಲುತ್ತಾ? ಕಾದುನೋಡಬೇಕಿದೆ.