ಆಧುನಿಕ ಜಗತ್ತಿನ ಭರಾಟೆ ಬದುಕಲ್ಲಿ ಎಲ್ಲವೂ ವ್ಯವಹಾರಿಕ…. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮನುಷತ್ವ, ಮಾನವೀಯತೆ, ಅನುಕಂಪ ಎಂಬುದೇ ಸಮಾಜದಲ್ಲಿ ಇಲ್ಲದಂತಾಗಿದೆ. ಹೀಗಿರುವಾಗ ಪರಸ್ಪರ ಸಹಾಯ, ಸಹಾನುಭೂತಿ ಎಂಬುದನ್ನು ನಿರೀಕ್ಷಿಸಲೂ ಸಾದ್ಯವಿಲ್ಲದಷ್ಟು ನಿಷ್ಟುರತೆಯನ್ನು ಕಾಣುತ್ತಿರುವ ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಪ್ರಪಂಚದಲ್ಲಿ ಎಲ್ಲರೂ ಹೀಗಿದ್ದರೆ ಅದೆಷ್ಟು ಚೆಂದ…..ಎನ್ನಿಸದಿರದು.
ಇಂದಿನ ದಿನ ಮಾನಸದಲ್ಲಿ ನಮ್ಮ ಕಣ್ಮುಂದೆಯೇ ಅದೆಷ್ಟೋ ಜನರು ಕಷ್ಟಪಡುತ್ತಿದ್ದರೂ ಕಂಡರೂ ಕಾಣದಂತೆ ಹೋಗುವವರೇ ಹೆಚ್ಚು. ಸಹಾಯ ಮಾಡುವುದು ಹಾಗಿರಲಿ, ಸಹಾಯ ಬೇಕಾ ಎಂದು ಕೇಳುವುದೂ ದೂರದ ಮಾತು….. ಹೀಗಿರುವಾಗ ಇಲ್ಲೋರ್ವ ಬೈಕ್ ಸವಾರ ಇನ್ನೋರ್ವ ಬೈಕ್ ಸವಾರನಿಗೆ ಕಾಡಂಚಿನ ದಾರಿಯಲ್ಲಿ ಮಾಡಿರುವ ಸಹಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೈಕ್ ಸವಾರನೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಾಗುತ್ತಿದ್ದ ವೇಳೆ ಪೆಟ್ರೋಲ್ ಖಾಲಿಯಾಗಿ ಅರ್ಧದಾರಿಯಲ್ಲಿ ಬೈಕ್ ಕೈಕೊಟ್ಟಿದೆ. ಬೇರೆದಾರಿ ಇಲ್ಲದೇ ಬೈಕ್ ತಳ್ಳಿಕೊಂಡು ಹೆಂಡತಿ-ಮಕ್ಕಳ ಜೊತೆ ಹೆಜ್ಜೆ ಹಾಕಿದ್ದಾನೆ. ಇದೇ ವೇಳೆ ಇನ್ನೋರ್ವ ಬೈಕ್ ಸವಾರ ಅದೇ ಮಾರ್ಗವಾಗಿ ಬಂದಿದ್ದು, ಏನಾಯಿತು? ಎಂದು ಕೇಳಿದ್ದಾನೆ. ಕುಟುಂಬದ ಜೊತೆ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿ ಪೆಟ್ರೋಲ್ ಖಾಲಿಯಾಗಿದೆ ಎನ್ನುತ್ತಾನೆ. ಪೆಟ್ರೋಲ್ ಬಂಕ್ ಎಷ್ಟು ದೂರ ಇದೆ? ಎಂದು ಬೈಕ್ ಸವಾರ ಪ್ರಶ್ನಿಸುತ್ತಾನೆ. ಇನ್ನೂ 3 ಕಿ.ಮೀ. ಇದೆ ಎನ್ನುತ್ತಿದ್ದಂತೆ ಬೈಕ್ ಸವಾರ ತನ್ನ ಬಳಿ ಬಾಟಲ್ ನಲ್ಲಿ ಇದ್ದ ಎಕ್ಸ್ಟ್ರಾ ಪೆಟ್ರೋಲ್ ನ್ನು ಆತನಿಗೆ ನೀಡುತ್ತಾನೆ. ಪೆಟ್ರೋಲ್ ಹಾಕಿಕೊಂಡು ವ್ಯಕ್ತಿ ಹಣ ನೀಡಲು ಮುಂದಾದರೂ ಬೈಕ್ ಸವಾರ ತೆಗೆದುಕೊಳ್ಳದೇ ಇರಲಿ ನನ್ನ ಬಳಿ ಎಕ್ಸ್ಟ್ರಾ ಇತ್ತು. ಹಣ ಬೇಡ ಎಂದು ಹೇಳಿ ಮತ್ತೆ ತನ್ನ ಸವಾರಿ ಮುಂದುವರೆಸುತ್ತಾನೆ. ಕಾಡಂಚಿನ ದಾರಿಯಲ್ಲಿ ದೇವರಂತೆ ಪ್ರತ್ಯಕ್ಷನಾಗಿ ಸಹಾಯ ಮಾಡಿ ಹೊರಟ ಸವಾರನ ಮಾನವೀಯತೆ ನಿಜಕ್ಕೂ ಶ್ಲಾಘನೀಯ. ನಮ್ಮಲ್ಲಿಯೂ ಇಂತಹ ಮಾನವೀಯತೆ, ಕಷ್ಟದ ವೇಳೆ ಸ್ಪಂದಿಸುವ ಗುಣ ಬೆಳಸಿಕೊಂಡರೆ ಎಷ್ಟು ಚೆಂದ….. ಜೊತೆಗೆ ಒಬ್ಬರಿಗೊಬ್ಬರು ಹೀಗೆ ಸಹಾಯ ಮಾಡುತ್ತಾ ನಿಜವಾದ ಮನುಷ್ಯರಾಗಿ ಬಾಳಿದರೆ ಈ ಸಮಾಜ ಅದೆಷ್ಟು ಸುಂದರ ಅಲ್ಲವೇ…..