ಶಿವಮೊಗ್ಗ: ಬೈಕ್ ನಲ್ಲಿ ತೆರಳುತ್ತಿದ್ದ ಸವಾರನ ಮೇಲೆ ತೆಂಗಿನ ಕಾಯಿ ಬಿದ್ದು ಕೋಮಾಕ್ಕೆ ಜಾರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೆದ್ದಾರಿಯ ಗಾಜನೂರು ಚೆಕ್ ಪೋಸ್ಟ್ ಬಳಿ ನಡೆದಿದೆ.
16 ವರ್ಷದ ಯುವಕನೊಬ್ಬ ಬೈಕ್ ನ ಹಿಂಬದಿ ಕುಳಿತು ತೆರಳುತ್ತಿದ್ದ. ಈ ವೇಳೆ ಗಾಜನೂರು ಚೆಕ್ ಪೋಸ್ಟ್ ಬಳಿ ಬರುತ್ತಿದ್ದ ವೇಳೆ ಬಿರುಗಾಳಿ ಬೀಸಲಾರಂಭಿಸಿದೆ. ಬಿರುಗಾಳಿಗೆ ಹೆದ್ದಾರಿಗೆ ವಾಲಿಕೊಂಡಿದ್ದ ತೆಂಗಿನ ಮರದಿಂದ ಕಾಯಿ ಬಿದ್ದಿದೆ. ಹೀಗೆ ಬಿದ್ದ ಕಾಯಿ ಬೈಕ್ ನಲ್ಲಿ ಹಿಂಬದಿ ಕುಳಿತು ತೆರಳುತ್ತಿದ್ದ ಯುವಕ ತಲೆ ಮೇಲೆ ಬಿದ್ದಿದ್ದು, ಪರಿಣಾಮ ಯುವಕನ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಮೇ 7ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಕೋಮಾಗೆ ಜಾರಿದ್ದಾಗಿ ತಿಳಿದುಬಂದಿದೆ. ಮಗನ ಸ್ಥಿತಿಯಿಂದ ನೊಂದ ಪೋಷಕರು ತೆಂಗಿನ ಮರದ ಮಾಲೀಕರ ವಿರುದ್ಧ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.