
ಥಾಣೆ: ಮಳೆ ಅಬ್ಬರದ ನಡುವೆ ಆಟೋವೊಂದು ರಸ್ತೆಗುಂಡಿಯಲ್ಲಿ ಹಾದು ಹೋಗುವಾಗ ಬೈಕ್ ಸವಾರನೊಬ್ಬನ ಮೈಗೆ ಕೆಸರು ಸಿಡಿದ ಪರಿಣಾಮ ಬೈಕ್ ಸವಾರ ಆಟೋ ಚಾಲಕನಿಗೆ ಚಾಕು ಇರಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದೆ. ಶಹಬಾಜ್ ಖಾನ್ ಚಾಕು ಇರಿದ ಬೈಕ್ ಸವಾರ. ಶಹಬಾಜ್ ಘೋಡ್ ಬಂದರ್ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಾಗ ಆಟೋವೊಂದು ಪಕ್ಕದಲ್ಲಿಯೇ ಹಾದು ಹೋಗಿದೆ. ಈ ವೇಳೆ ಆಟೋ ಚಕ್ರ ರಸ್ತೆಗುಂಡಿಯಲ್ಲಿ ಇಳಿದ ಪರಿಣಾಮ ಆಟೊ ಚಕ್ರದಿಂದ ಕೆಸರು ಚಿಮ್ಮಿದ್ದು, ಅದು ಬೈಕ್ ಸವಾರನ ಮೈಗೆ ಮೆತ್ತಿಕೊಂಡಿದೆ. ಇದರಿಂದ ಕೋಪಗೊಂಡ ಬೈಕ್ ಸವಾರ ಶಹಬಾಜ್, ಅದೇ ರಸ್ತೆಯಲ್ಲಿ ಆಟೋ ವಾಪಾಸ್ ಬರುವವರೆಗೂ ಕಾದು ಕುಳಿತಿದ್ದಾನೆ.
ಒಂದು ಗಂಟೆ ಬಳಿಕ ಆಟೋ ಅದೇ ಮಾರ್ಗವಾಗಿ ವಾಪಾಸ್ ಬರುತ್ತಿದ್ದಂತೆ ಬೈಕ್ ಸವಾರ ಆಟೋ ಚಾಲಕನನ್ನು ತಡೆದು ಮನಬಂದಂತೆ ಚಾಕು ಇರಿದು ಹಲ್ಲೆ ನಡೆಸಿದ್ದಾನೆ.
ಆಟೋ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಬೈಕ್ ಸವಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.