
ಚಿಕ್ಕಮಗಳೂರು: ಅತಿ ವೇಗ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಬೈಕ್ ಸವಾರನಿಗೆ ತರೀಕೆರೆ ನ್ಯಾಯಾಲಯ ಕಾರಾಗೃಹ ಶಿಕ್ಷೆ, ದಂಡ ವಿಧಿಸಿದೆ.
ಅಜ್ಜಂಪುರ ಸಮೀಪದ ಸೊಕ್ಕೆ ತಿಮ್ಮಾಪುರ ಗ್ರಾಮದ ಪ್ರತಾಪ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. 2017ರ ಆಗಸ್ಟ್ 23ರಂದು ಅಜ್ಜಂಪುರ ಎಪಿಎಂಸಿ ಮುಂಭಾಗ ಬೈಕ್ ನಲ್ಲಿ ಅತಿ ವೇಗವಾಗಿ ಬಂದು ಎದುರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ್ದ. ಈ ವೇಳೆ ಎದುರಿನ ಬೈಕ್ ನಲ್ಲಿದ್ದ ಹಿಂಬದಿ ಸವಾರ ಲೋಕೇಶಪ್ಪ ಮೃತಪಟ್ಟಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಬಸವರಾಜಪ್ಪ ಗಾಯಗೊಂಡಿದ್ದರು.
ತರೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನಿರ್ಲಕ್ಷ ವಾಹನ ಚಾಲನೆಗೆ ಆರು ತಿಂಗಳು ಜೈಲು, ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ. ಬಸವರಾಜಪ್ಪರನ್ನು ಗಾಯಗೊಳಿಸಿದ್ದಕ್ಕೆ 6 ತಿಂಗಳು ಜೈಲು, 500 ರೂ. ದಂಡ ವಿಧಿಸಲಾಗಿದೆ. ಅಪಘಾತದಲ್ಲಿ ಲೋಕೇಶಪ್ಪ ಮೃತಪಟ್ಟಿದ್ದಕ್ಕೆ 1 ವರ್ಷ ಜೈಲು, 8500 ರೂ. ದಂಡ ವಿಧಿಸಲಾಗಿದೆ.
ದಂಡದ ಹಣದಲ್ಲಿ ಮೃತನ ಕುಟುಂಬಕ್ಕೆ 5,000 ರೂ., ಗಾಯಾಳು ಬಸವರಾಜಪ್ಪರಿಗೆ 3000 ರೂ. ಹಾಗೂ ಸರ್ಕಾರಕ್ಕೆ 2000 ರೂ. ಪಾವತಿಸಲು ಆದೇಶ ನೀಡಲಾಗಿದೆ. ಸಹಾಯಕ ಸರ್ಕಾರಿ ಅಭಿಯೋಜಕ ಎನ್. ಗೋವಿಂದರಾಜ್ ವಾದ ಮಂಡಿಸಿದ್ದರು.