ಪಾಟ್ನಾ: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ರೊಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ.
ರಸ್ತೆ ಬದಿ ನಿಂತಿದ್ದ ಟ್ರಕ್ ಗೆ ಸ್ಕಾರ್ಪಿಯೋ ವಾಹನ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಕುಟುಂಬದ 7 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಸಸಾರಂ ಪಟ್ಟಣದ ಶಿವಸಾಗರ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಈ ಅಪಘಾತ ಸಂಭವಿಸಿದೆ. ಕುಟುಂಬವು ಜಾರ್ಖಂಡ್ ನ ರಾಜರಪ್ಪ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ರಾಜಮತಿ ದೇವಿ(55), ಸೋನಿ ಕುಮಾರಿ (35), ಅರವಿಂದ್ ಶರ್ಮಾ(40), ಆದಿತ್ಯ (8), ರಿಯಾ ಕುಮಾರಿ (9), ತರಾ ಕುಮಾರಿ (22), ಚಾಂದಿನಿ ಕುಮಾರಿ (15) ಮೃತರು.
ಸ್ಕಾರ್ಪಿಯೋ ವಾಹನ ಚಾಲಕನ ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬಂದಿದ್ದರಿಂದ ಚಾಲಕನಿಗೆ ನಿಯಂತ್ರಣ ತಪ್ಪಿದ್ದು, ಸ್ಕಾರ್ಪಿಯೋ ನಿಂತಿದ್ದ ಟ್ರಕ್ ಗೆ ಡಿಕ್ಕಿಹೊಡೆದಿದೆ. ಪರಿಣಾಮ 7 ಜನರು ದುರಂತ ಅಂತ್ಯ ಕಂಡಿದ್ದಾರೆ.