ಬಿಹಾರದ ಖಾಗಾರಿಯಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಸಹಾಯಕ ಶಿಕ್ಷಕಿಯೊಬ್ಬರುಕಳೆದ ಐದು ತಿಂಗಳಿನಿಂದ ಗುಜರಾತ್‌ನಲ್ಲಿದ್ದರೂ ಸಹ ಸಂಬಳ ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮ್ ಉದಯ್ ಮಹ್ತೋ, ಸೀಮಾ ಕುಮಾರಿ ಹೆಸರಿನ ಈ ಶಿಕ್ಷಕಿ ಕೆಲಸ ಮಾಡುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಆಕೆ ಈ ಶಾಲೆಯಲ್ಲಿ ಕೆಲಸ ಮಾಡಲು ವಿಶೇಷ ನಿಯೋಜನೆಗೊಂಡಿದ್ದರು.
“ಈ ಶಿಕ್ಷಕಿ ಕಳೆದ ಕೆಲ ತಿಂಗಳಿನಿಂದ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ. ಸೀಮಾ ಕುಮಾರಿ ಅಸಲಿಗೆ ಕೆಲಸ ಮಾಡುತ್ತಿದ್ದ ಮಧ್ಯಮ ಶಾಲೆಯ ಮುಖ್ಯ ಶಿಕ್ಷಕರು ತೋರುವ ಹಾಜರಾತಿ ದಾಖಲೆ ಅನುಸಾರ ಆಕೆಗೆ ಮಾಸಿಕ ವೇತನ ನೀಡಲಾಗುತ್ತಿತ್ತು ಎಂದು ಇಲಾಖೆಯಲ್ಲಿ ತನಿಖೆ ನಡೆಸಿದ ಬಳಿಕ ತಿಳಿದು ಬಂದಿದೆ,” ಎಂದು ಮಹ್ತೋ ತಿಳಿಸಿದ್ದಾರೆ.
“ಪ್ರಾಥಮಿಕ ಶಾಲೆಯು ಸೀಮಾ ಕುಮಾರಿ ಕೆಲಸಕ್ಕೆ ಗೈರು ಹಾಜರಾಗಿರುವ ವರದಿಯನ್ನು ಆಕೆಯ ಅಸಲಿ ಶಾಲೆಗೆ ಕಳುಹಿಸುತ್ತಿತ್ತು. ಆದರೆ ಅಲ್ಲಿನ ಮುಖ್ಯ ಶಿಕ್ಷಕರು ಈ ಗೈರು ಹಾಜರಿಯ ವರದಿಯನ್ನು ಹಾಜರಿ ಎಂದು ಮಾರ್ಪಾಡು ಮಾಡಿ ಕಳುಹಿಸುತ್ತಿದ್ದರು. ಈ ಹಾಜರಾತಿ ದಾಖಲೆಯ ಮೇಲೆ ಸೀಮಾಗೆ ಸೆಪ್ಟೆಂಬರ್ 2022ರಿಂದ ವೇತನ ಬಿಡುಗಡೆ ಮಾಡಲಾಗುತ್ತಿತ್ತು,” ಎಂದು ಬಿಇಓ ತಿಳಿಸಿದ್ದಾರೆ.
“ಸೀಮಾ ಕುಮಾರಿ ಹಾಗೂ ಮುಖ್ಯ ಶಿಕ್ಷಕ ವಿಕಾಸ್ ಕುಮಾರರ ವೇತನ ನಿಲ್ಲಿಸುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಾವು ವರದಿ ಕಳುಹಿಸಿದ್ದು, ಇಲಾಖೆ ಅದರಂತೆ ಕ್ರಮ ತೆಗೆದುಕೊಂಡಿದೆ,” ಎಂದಿದ್ದಾರೆ ಮೆಹ್ತೋ.
ಇದೇ ರೀತಿ ಶಾಲೆಗೆ ಒಂದೇ ಒಂದು ದಿನ ಕೆಲಸಕ್ಕೆ ಹೋಗದೇ ಸಂಬಳ ಪಡೆಯುತ್ತಿರುವ ಶಂಕೆಯ ಮೇಲೆ 400ಕ್ಕೂ ಹೆಚ್ಚು ಶಿಕ್ಷಕರ ಮೇಲೆ ಕಣ್ಣಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.