
ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಶಕ್ತಿ ಎಂದರೆ ಅದು ತಾಯಿಯ ಪ್ರೇಮ ಮತ್ತು ಮಮತೆ. ಆಕೆಯ ಎದುರಿಗೆ ಯಾವುದೇ ಶಕ್ತಿಯೂ ಹೆಚ್ಚು ನಿಲ್ಲುವುದಿಲ್ಲ. ತನ್ನ ಕರುಳಬಳ್ಳಿಯ ರಕ್ಷಣೆಯಲ್ಲಂತೂ ಆಕೆ ನಿಜವಾದ ಯೋಧೆಯಂತೆ ಹೋರಾಡುತ್ತಾಳೆ. ಅಂತಹ ಹೋರಾಟವೊಂದರಲ್ಲಿ ತಾಯಿ ತನ್ನ ಎರಡು ಮಕ್ಕಳಿಗೆ ತಾನೇ ಗುರಾಣಿಯಾಗಿ ನಿಂತು ರಕ್ಷಿಸಿದ್ದಾಳೆ.
ಶನಿವಾರ ಬಿಹಾರದ ಬರ್ಹ್ ರೈಲು ನಿಲ್ದಾಣದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ರೈಲು ಹರಿದಿದ್ದು ಪವಾಡ ಸದೃಶ ರೀತಿಯಲ್ಲಿ ಅವರು ಬದುಕುಳಿದಿದ್ದಾರೆ.
ಮಹಿಳೆಯು ತನ್ನ ಇಬ್ಬರು ಮಕ್ಕಳನ್ನು ರಕ್ಷಿಸಲು ರೈಲು ಹಳಿ ಪಕ್ಕದ ಮೇಲೆ ಮಲಗಿರುವ ವಿಡಿಯೋ ವೈರಲ್ ಆಗಿದೆ. ರೈಲು ಅವರಿಂದ ಕೆಲವೇ ಇಂಚುಗಳಷ್ಟು ದೂರದಲ್ಲಿದ್ದು ಹಳಿಗಳ ಮೇಲೆ ಸಾಗಿ ಹೋಗಿದೆ.
ಮಹಿಳೆ ಮತ್ತು ಆಕೆಯ ಮಕ್ಕಳು ಬೇಗುಸರಾಯ್ನಿಂದ ಬಂದು ತಮ್ಮ ಕುಟುಂಬದೊಂದಿಗೆ ಭಾಗಲ್ಪುರದಿಂದ ದೆಹಲಿಗೆ ಚಲಿಸುವ ವಿಕ್ರಮಶಿಲಾ ಎಕ್ಸ್ ಪ್ರೆಸ್ನಲ್ಲಿ ದೆಹಲಿಗೆ ಪ್ರಯಾಣಿಸುತ್ತಿದ್ದರು.
ಶನಿವಾರ ಬರ್ಹ್ನಲ್ಲಿ ರೈಲು ಹತ್ತುವಾಗ ಪ್ಲಾಟ್ಫಾರ್ಮ್ನಲ್ಲಿ ಭಾರೀ ಜನಸಂದಣಿ ಇತ್ತು. ನೂಕುನುಗ್ಗಲಿನಿಂದಾಗಿ ಮಹಿಳೆ ತನ್ನ ಮಕ್ಕಳೊಂದಿಗೆ ಟ್ರ್ಯಾಕ್ ಮೇಲೆ ಬಿದ್ದಿದ್ದಾಳೆ. ಜನರು ಇದನ್ನು ಗಮನಿಸಿ ತಾಯಿ – ಮಕ್ಕಳನ್ನು ರಕ್ಷಿಸುವ ಹೊತ್ತಿಗೆ ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿತು. ಈ ವೇಳೆ ಮಹಿಳೆ ತನ್ನ ಪೂರ್ಣ ದೇಹದಿಂದ ಮಕ್ಕಳ ದೇಹವನ್ನು ಮುಚ್ಚಿ ರೈಲು ಹೋಗುವವರೆಗೆ ರಕ್ಷಿಸಿದ್ದಾಳೆ.
ರೈಲು ಹೊರಟ ನಂತರ ಹಲವಾರು ಜನ ಪ್ಲಾಟ್ಫಾರ್ಮ್ನಿಂದ ಜಿಗಿದು ಮಹಿಳೆ ಮತ್ತು ಅವರ ಮಕ್ಕಳನ್ನು ರಕ್ಷಿಸಿದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.