ಪಾಟ್ನಾ ಹೊರವಲಯದ ಅವಧ್ಪುರ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಕೇವಲ ಐದು ನಿಮಿಷ ಅಂತರದಲ್ಲಿ ಎರಡು ಬೇರೆ ಕೊರೊನಾ ಲಸಿಕೆಯ ಡೋಸ್ಗಳನ್ನ ನೀಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈಕೆಗೆ ಮೊದಲು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿತ್ತು. ಆದರೆ ಇದಾದ ಕೆಲವೇ ನಿಮಿಷಗಳಲ್ಲಿ ಕೋವ್ಯಾಕ್ಸಿನ್ ಡೋಸ್ ನೀಡಲಾಗಿದೆ.
65 ವರ್ಷದ ಮಹಿಳೆಯನ್ನ ಸುನೀಲಾ ದೇವಿ ಎಂದು ಗುರುತಿಸಲಾಗಿದೆ. ಈ ಎರಡೂ ಡೋಸ್ಗಳನ್ನ ಪಡೆದ ಬಳಿಕ ಸುನೀಲಾ ದೇವಿಗೆ ಜ್ವರ ಶುರುವಾಗಿದೆ. ಈಕೆ ಜ್ವರದಿಂದ ಬಳಲುತ್ತಿದ್ದರೂ ಸಹ ಯಾವೊಬ್ಬ ನರ್ಸ್ ಇಲ್ಲವೇ ವೈದ್ಯರಾಗಲಿ ಆಕೆಯ ಸಹಾಯಕ್ಕೆ ಧಾವಿಸಿಲ್ಲ. ಆದರೆ ಈಕೆಯ ಆರೋಗ್ಯದ ಮೇಲೆ 24 ಗಂಟೆಗಳ ಕಾಲ ನಿಗಾ ಇಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸುನೀಲಾ ದೇವಿ ನಿರ್ಜಲೀಕರಣದಿಂದ ಬಳಲುತ್ತಿರೋದನ್ನ ಗಮನಿಸಿದ ಕುಟುಂಬಸ್ಥರು ಗ್ಲುಕೋಸ್ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಲಸಿಕಾ ಕೇಂದ್ರದ ಮೆಡಿಕಲ್ ಆಫೀಸರ್ ಸಂಜಯ್ ಕುಮಾರ್, 18 ರಿಂದ 45 ವರ್ಷದೊಳಗಿನವರಿಗೆ ಒಂದೇ ಕೊಠಡಿಯಲ್ಲಿ ಲಸಿಕೆಯನ್ನ ನೀಡಲಾಗುತ್ತಿತ್ತು. ಆದರೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆಯುವವರಿಗೆ ಪ್ರತ್ಯೇಕ ಸಾಲನ್ನ ನಿಗದಿ ಮಾಡಲಾಗಿತ್ತು. ಕೋವಿಶೀಲ್ಡ್ ಲಸಿಕೆಯನ್ನ ಪಡೆದಿದ್ದ ಸುನೀಲಾರಿಗೆ ಒಂದೆಡೆ ಕೂತು ವಿಶ್ರಾಂತಿ ಪಡೆಯುವಂತೆ ಹೇಳಲಾಗಿತ್ತು. ಆದರೆ ಅವರು ವಿಶ್ರಾಂತಿ ಮಾಡೋದ್ರ ಬದಲು ಕೋವ್ಯಾಕ್ಸಿನ್ ಲಸಿಕೆ ನೀಡುತ್ತಿರುವ ಸಾಲಲ್ಲಿ ಹೋಗಿ ನಿಂತಿದ್ದಾರೆ. ಇದೇ ಕಾರಣಕ್ಕೆ ಈ ಪ್ರಮಾದವಾಗಿದೆ. ಆದರೆ ಸುನಿಲಾ ದೇಹದಲ್ಲಿ ಅಂತಹ ಯಾವುದೇ ಗಂಭೀರ ಲಕ್ಷಣ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.