ಪಾಟ್ನಾ: ಮಹಾರಾಷ್ಟ್ರದ ಮುಂಬೈನ ಸಕಿನಾಕಾ ಪ್ರದೇಶದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮಾಸುವ ಮೊದಲೇ ಬಿಹಾರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಿಹಾರದ ಭಾಗಲ್ಪುರದಲ್ಲಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಶನಿವಾರ ರಾತ್ರಿ ಆಕೆಯ ಪತಿ 500 ರೂಪಾಯಿ ‘ಹಫ್ತಾ'(ಸುಲಿಗೆ ಹಣ) ನೀಡಲು ನಿರಾಕರಿಸಿದ ನಂತರ ದುರುಳರು ಇಂತಹ ಕೃತ್ಯವೆಸಗಿದ್ದಾರೆ.
ಸಾವನ್ ಯಾದವ್ ಮತ್ತು ಕನ್ಹಯ್ಯಾ ಅವರು ಮಹಿಳೆಯ ಗಂಡನಿಂದ ಮದ್ಯ ಮತ್ತು ಊಟಕ್ಕಾಗಿ 500 ರೂ. ಕೊಡುವಂತೆ ಬೆದರಿಸಿದ್ದರು. ಪತಿ ಅವರ ಬೇಡಿಕೆಯನ್ನು ತಿರಸ್ಕರಿಸಿ ಹಣ ಕೊಡಲು ನಿರಾಕರಿಸಿದಾಗ ಅವರು ಮಹಿಳೆಯನ್ನು ಬಲವಂತವಾಗಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕ್ರೂರವಾಗಿ ಥಳಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ಪಿಸ್ತೂಲ್ ಹೊಂದಿದ್ದ ಕನ್ಹಯ್ಯಾ ತನ್ನನ್ನು ಬೆದರಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. ಸಾವನ್ ಗೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತೆ ಪ್ರೇರೇಪಿಸಿದ್ದ. ಅವರಿಂದ ತಪ್ಪಿಸಿಕೊಂಡ ಮಹಿಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದ ಊರಿಗೆ ಓಡಿದ್ದು, ಅಲ್ಲಿನ ಜನ ಬಟ್ಟೆಗಳನ್ನು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮಹಿಳೆ ದೂರಿನ ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ನಾವು ಆರೋಪಿಗಳ ಕ್ರಿಮಿನಲ್ ಪೂರ್ವಾಪರ ಕೂಡ ಪರಿಶೀಲಿಸುತ್ತಿದ್ದೇವೆ ಎಂದು ನಗರ ಎಸ್ಪಿ ಸ್ವರ್ನ್ ಪ್ರಭಾತ್ ತಿಳಿಸಿದ್ದಾರೆ.