
ರಸಗುಲ್ಲಾ…… ಈ ಪದ ಕೇಳ್ತಿದ್ದ ಹಾಗೇನೇ ಬಾಯಲ್ಲಿ ನೀರು ಬಂದು ಬಿಡುತ್ತೆ. ಬಂಗಾಳದ ಪ್ರಸಿದ್ಧ ಸಿಹಿ ಇದು. ಇದೇ ಸಿಹಿ ರಸಗುಲ್ಲಾ ಈಗ ರೈಲ್ವೆ ಇಲಾಖೆಯವರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಯಾಕಂದ್ರೆ ಇದೇ ರಸಗುಲ್ಲಾದಿಂದಾಗಿ 100ಕ್ಕೂ ಹೆಚ್ಚು ರೈಲುಗಳು ತಮ್ಮ ಮಾರ್ಗವನ್ನೇ ಬದಲಾಯಿಸಬೇಕಾಯಿತು.
ಬಿಹಾರದ ಲೀಸರಾಯ್‌ನಲ್ಲಿರುವ ಬರಾಹಿಯಾ ರೈಲು ನಿಲ್ದಾಣದಲ್ಲಿ ನಡೆದಿರೋ ಘಟನೆ. ಇಲ್ಲಿನ ಸ್ಥಳೀಯರು ಸುಮಾರು 40ಗಂಟೆಗಳ ಕಾಲ ಪ್ರತಿಭಟನೆಯನ್ನ ನಡೆಸಿದ್ಧಾರೆ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಟೆಂಟ್‌ಗಳನ್ನ ಹಾಕಿ ರೈಲು ಚಲಿಸದೆ ಇರುವಂತೆ ನೋಡಿಕೊಂಡರು.
ಇದರಿಂದಾಗಿ ಹೌರಾ-ದೆಹಲಿ ರೈಲು ಮಾರ್ಗದಲ್ಲಿ 24 ಗಂಟೆಗಳ ಕಾಲ 12 ರೈಲುಗಳನ್ನ ರದ್ದುಗೊಳಿಸಬೇಕಾಯಿತು. ಮತ್ತು 100ಕ್ಕೂ ಹೆಚ್ಚು ರೈಲುಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು, ಇದರಿಂದ ಸಾವಿರಾರು ರೈಲು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಅಸಲಿಗೆ ಈ ಪ್ರತಿಭಟನಾಕಾರರ ಬೇಡಿಕೆ ಏನಂದ್ರೆ ಬಿಹಾರದ ಲೀಸರಾಯ್‌ನ ಬರಾಹಿಯಾನಲ್ಲಿ ರೈಲು ನಿಲ್ದಾಣದ ಮೂಲಕ ಹೋಗುವ 10 ರೈಲುಗಳು ನಿಲ್ಲಿಸಬೇಕು. ಅದು ಕೂಡಾ ರಸಗುಲ್ಲಾಗಾಗಿ.
ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ; ಕೇಂದ್ರದಿಂದ ಮಾರ್ಗಸೂಚಿ
ಪ್ರತಿಭಟನೆಗೂ ರಸಗುಲ್ಲಾಗೂ ಏನು ಸಂಬಂಧ ಅಂತಿರಾ..? ಬಿಹಾರದ ಲಖಿಸಾರೈ ರಸಗುಲ್ಲಾ ದೇಶಾದ್ಯಂತ ಫೇಮಸ್. ಇಲ್ಲಿನ ರಸಗುಲ್ಲಾಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ತಯಾರಿಸಲಾಗುವ ರಸಗುಲ್ಲಾವನ್ನ ಬೇರೆ-ಬೇರೆ ರಾಜ್ಯ, ರಾಷ್ಟ್ರಗಳಿಗೆ ಕಳುಹಿಸಲಾಗುತ್ತೆ. ಯಾವುದೇ ವಿಶೇಷ ಕಾರ್ಯಕ್ರಮವಿದ್ದರೂ ಇಲ್ಲಿನ ರಸಗುಲ್ಲಾಗಾಗಿ ಬೇಡಿಕೆ ಬಂದಿರುತ್ತೆ. ಹೀಗಾಗಿ ಲಖಿಸಾರೈ ಪಟ್ಟಣದಲ್ಲಿರುವ 200ಹೆಚ್ಚು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತೆ.
ಈಗ ಇಲ್ಲಿ ರೈಲುಗಳು ನಿಲುಗಡೆಯಾಗದ ಕಾರಣ ಇಲ್ಲಿನ ರಸಗುಲ್ಲಾ ವ್ಯಾಪಾರಿಗಳು ನಷ್ಟವನ್ನ ಅನುಭವಿಸುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಬಂದ ರಸಗುಲ್ಲಾ ಬೇಡಿಕೆಯನ್ನ ಈಡೇರಿಸಲು ಕೂಡಾ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನಷ್ಟ ಅನುಭವಿಸ್ತಿರೋ ವ್ಯಾಪಾರಿಗಳ ಈಗ ಪ್ರತಿಭಟನೆ ಮಾಡಿದ್ದಾರೆ.
ರಸಗುಲ್ಲಾ ವ್ಯಾಪಾರಿಗಳಿಗೆ ರೈಲುಗಳ ಮೂಲಕ ವ್ಯಾಪಾರ ನಡೆಸುವುದು ತುಂಬಾ ಸುಲಭದ ಹಾಗೆಯೇ ಅಗ್ಗದ ಕೆಲಸ, ಆದರೆ ಈಗ ರೈಲುಗಳು ನಿಲ್ದಾಣದಲ್ಲಿ ನಿಲ್ಲದೇ ಇರುವುದರಿಂದ ನಷ್ಟವನ್ನ ಅನುಭವಿಸೋ ಹಾಗಾಗಿದೆ. ಸ್ಥಳೀಯ ಉದ್ಯಮಿ ರಂಜನ್ ಶರ್ಮಾ ಅವರು ಹೇಳುವ ಪ್ರಕಾರ ರೈಲಿನಲ್ಲಿ ಬರಾಹಿಯಾದಿಂದ ಪಾಟ್ನಾಗೆ ಪ್ರಯಾಣ ದರ 55ರೂಪಾಯಿ, ಮತ್ತು ಪ್ರಯಾಣದ ಸಮಯ ಕೇವಲ ಎರಡು ಗಂಟೆ. ಒಂದು ವೇಳೆ ವ್ಯಾಪಾರಿಗಳು ರಸ್ತೆಯ ಮೂಲಕ ತಯಾರಿಸಿರುವ ರಸಗುಲ್ಲಾ ಕಳುಹಿಸಿದರೆ, ಸಾಮಾನ್ಯವಾಗಿ 150 ರೂಪಾಯಿ ವೆಚ್ಚ ತಗಲುತ್ತದೆ. ಇದಲ್ಲದೆ ಕ್ಯಾಬ್ ಅಥವಾ ಕಾರಿನಲ್ಲಿ ಸಾಗಿಸಿದರೆ ಇದರ ವೆಚ್ಚ ತುಂಬಾ ದುಬಾರಿಯಾಗಿರುತ್ತೆ. ಮದುವೆ ಸೀಜನ್ಗಳಲ್ಲಂತೂ ಬರಲಿರೋ ಲಾಭ ಕೂಡಾ ನಷ್ಟದ ರೂಪದ ಪಡೆದಿರುತ್ತೆ. ಅಂತ ಹೇಳುತ್ತಾರೆ.
ರಸಗುಲ್ಲಾ ವ್ಯಾಪಾರಿಗಳ ಸಮಸ್ಯೆಯನ್ನ ಕೇಳಿಸಿಕೊಂಡಿರೋ ರೈಲ್ವೆ ಇಲಾಖೆ ಈಗ 15ದಿನಗಳ ಮಟ್ಟಿಗೆ ಎಕ್ಸ್ಪ್ರೆಸ್ ರೈಲನ್ನ ನಿಲುಗಡೆ ಮಾಡುವುದಾಗಿ ಭರವಸೆ ನೀಡಿದೆ. ಈಗ ಸದ್ಯಕ್ಕೆ ವ್ಯಾಪಾರಿಗಳು ಪ್ರತಿಭಟನೆಯನ್ನ ಹಿಂಪಡೆದಿದ್ದಾರೆ