ದೇವಸ್ಥಾನ ದರೋಡೆ ಮಾಡೋಕೆ ಬಂದ ಕಳ್ಳರು, ಬಾಗಿಲು ಒಡೆಯುವುದಕ್ಕು ಮುನ್ನ ಅದೇ ಜಾಗದಲ್ಲಿದ್ದ ಏಳು ಬೀದಿನಾಯಿಗಳಿಗೆ ವಿಷವುಣಿಸಿ ಸಾಯಿಸಿದ್ದಾರೆ. ಈ ಮನಕಲುಕುವ ಭೀಕರ ಘಟನೆ ಬಿಹಾರದ ಕೈಮೂರ್‌ನಲ್ಲಿ ನಡೆದಿದೆ.
ಕೈಮೂರ್‌ನಲ್ಲಿರುವ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳರು, ಕದಿಯುವ ಸಂದರ್ಭದಲ್ಲಿ ನಾಯಿಗಳು ಬೊಗಳಬಾರದು ಎಂದು ಈ ಕೃತ್ಯ ಎಸಗಿದ್ದಾರೆ. ದೇವಸ್ಥಾನದ ಬಳಿಯಿದ್ದ ಬೀದಿ ನಾಯಿಗಳಿಗೆ ವಿಷ ಉಣಿಸಿದ ಕಳ್ಳರು, ಹುಂಡಿಯಲ್ಲಿದ್ದ 15,000 ರೂ.ಗಳನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷ ತಿಂದ ಮೂಖಪ್ರಾಣಿಗಳು ದೇವಸ್ಥಾನದ ಸಮೀಪವೆ ಸತ್ತು ಬಿದ್ದಿವೆ.
ದೇವಸ್ಥಾನದ ಅರ್ಚಕರು ಮರುದಿನ ಪ್ರಾರ್ಥನೆ ಸಲ್ಲಿಸಲು ಹೋದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ಕೈಮೂರ್‌ನ ಮೊಹಾನಿಯಾ ಪ್ರದೇಶದ ರೈಲ್ವೆ ಮಾಲ್ ಗೋಡೌನ್ ರಸ್ತೆಯ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಪೊಲೀಸ್ ಠಾಣೆಯ ಇಂಚಾರ್ಜ್ ಅಧಿಕಾರಿ ಜೈಪ್ರಕಾಶ್ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೇವಸ್ಥಾನದ ಕಾರ್ಯದರ್ಶಿ ಧೀರೇಂದ್ರ ಪ್ರತಾಪ್ ಸಿಂಗ್, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೇಗುಲದ ಬಾಗಿಲು ಮುರಿದು ಹುಂಡಿಯಲ್ಲಿದ್ದ 15ರಿಂದ 20 ಸಾವಿರ ರೂ. ಅನ್ನು ಕದ್ದೊಯ್ದಿದ್ದಾರೆ. ದೇವಸ್ಥಾನದ ಬಳಿ ವಾಸಿಸುತ್ತಿದ್ದ ಏಳು ಅಮಾಯಕ ಪ್ರಾಣಿಗಳಿಗೂ ವಿಷ ಹಾಕಿ ಕೊಂದು ಹಾಕಿದ್ದಾರೆ. ಆರತಿ ನಂತರ ಪ್ರಸಾದ ತೆಗೆದುಕೊಳ್ಳಲು ಈ ಮುಗ್ಧ ಜೀವಿಗಳು ದೇವಸ್ಥಾನದಲ್ಲಿಯೇ ಇರುತ್ತಿದ್ದರು. ಅವುಗಳನ್ನು ಸಾಯಿಸಿದ್ದಾರೆ. ಈ ವಿಷಯವನ್ನು ತಳ್ಳಿಹಾಕಬಾರದು, ಆರೋಪಿಗಳನ್ನ ಸುಮ್ಮನೆ ಬಿಡಬಾರದು ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.