ಪಾಟ್ನಾ: ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ಸರಸವಾಡುವಾಗಲೇ ಸಿಕ್ಕಿಬಿದ್ದ 17 ವರ್ಷದ ಬಾಲಕನ ಮರ್ಮಾಂಗವನ್ನು ಕತ್ತರಿಸಿ ಯುವತಿ ಮನೆಯವರು ಕೊಲೆ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಯುವಕನ ಕುಟುಂಬದವರು ಯುವತಿ ಮನೆಯವರನ್ನು ಹಿಗ್ಗಾಮುಗ್ಗಾ ಥಳಿಸಿ ಅವರ ಮನೆಯ ಎದುರಲ್ಲೇ ಯುವಕನ ಅಂತ್ಯಕ್ರಿಯೆ ನಡೆಸಿದ್ದಾರೆ.
ಮುಜಾಫರ್ ಪುರ್ ಜಿಲ್ಲೆಯ ಶಾಂತಿ ಪೊಲೀಸ್ ಠಾಣೆ ವ್ಯಾಪ್ತಿಯ ರೆಪುರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಹುಡುಗಿ ಮನೆಯವರು ಸಂಬಂಧ ತೊರೆಯುವಂತೆ ಬಾಲಕನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಕೂಡ ಶುಕ್ರವಾರ ರಾತ್ರಿ ಬಾಲಕಿಯ ಮನೆಗೆ ತೆರಳಿ ಸಲ್ಲಾಪದಲ್ಲಿ ತೊಡಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ಆತನನ್ನು ಥಳಿಸಿ ಬಟ್ಟೆ ತೆಗೆದು ಜನನಾಂಗ ಕತ್ತರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕನ ಸಾವಿನಿಂದ ಆಕ್ರೋಶಗೊಂಡ ಆತನ ಮನೆಯವರು ಹುಡುಗಿ ಮನೆಯ ಮೇಲೆ ದಾಳಿ ಸಿಕ್ಕವರನ್ನೆಲ್ಲಾ ಥಳಿಸಿದ್ದಾರೆ. ಅವರ ಮನೆಯ ಎದುರಲ್ಲೇ ಅಂತ್ಯಕ್ರಿಯೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.